ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ಜವಾನ್. ಆ್ಯಕ್ಷನ್ ಪ್ಯಾಕ್ಡ್ ಜವಾನ್ ಸೆಪ್ಟೆಂಬರ್ 7 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಮುಂಗಡ ಟಿಕೆಟ್ ಬುಕಿಂಗ್ ಪ್ರಕ್ರಿಯೆ ಆರಂಭಗೊಂಡಿದ್ದು, ಅಭಿಮಾನಿಗಳು ಸಿನಿಮಾ ಕುರಿತು ತಮ್ಮ ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. ಎಸ್‌ಆರ್‌ಕೆ ಮುಖ್ಯಭೂಮಿಕೆಯ ಸಿನಿಮಾ ಮುಂಗಡ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ. ಇದು ನಟನ ಜನಪ್ರಿಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಮತ್ತೊಮ್ಮೆ ತಮ್ಮ ಅಭಿಮಾನಿಗಳ ಸಂಭ್ರಮಾಚರಣೆಗೆ ಕಾರಣರಾಗಿದ್ದಾರೆ. ಬಹಳ ದಿನಗಳಿಂದ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದ ಜವಾನ್ ಬಿಡುಗಡೆ ಹೊಸ್ತಿಲಲ್ಲಿದೆ. ಮುಂಗಡ ಟಿಕೆಟ್ ಬುಕಿಂಗ್ ಪ್ರಕ್ರಿಯೆ ಆರಂಭಗೊಂಡಿದೆ. ಸಿನಿಮಾ ತೆರೆಕಾಣುವ ಮೊದಲ ದಿನದ ಟಿಕೆಟ್‌ಗಳು (ಹಲವು ಚಿತ್ರಮಂದಿರಗಳ ಟಿಕೆಟ್‌ಗಳು) ಕೇವಲ 15 ನಿಮಿಷಗಳಲ್ಲಿ ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿವೆ. ಜವಾನ್ ಮತ್ತು ಎಸ್‌ಆರ್‌ಕೆ ಕ್ರೇಜ್ ಬಗ್ಗೆ ನಿಮಗೆ ವಿಶೇಷವಾಗಿ ಹೇಳಬೇಕಿಂದಿಲ್ಲ. ಆದ್ರೆ 15 ನಿಮಿಷಗಳಲ್ಲಿ ಟಿಕೆಟ್ಸ್ ಸೋಲ್ಡ್ ಔಟ್ ಆಗಿರೋದನ್ನು ನೋಡಿದ್ರೆ ಚಿತ್ರ ಸೂಪರ್ ಹಿಟ್ ಆಗಲಿದೆ ಎಂದು ಅಭಿಮಾನಿಗಳು ತಿಳಿಸುತ್ತಿದ್ದಾರೆ.
ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಚಿತ್ರವು ಸಾಗರೋತ್ತರ ಪ್ರದೇಶ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ಈಗಾಗಲೇ 1.2 ಕೋಟಿ ರೂ.ಗಳನ್ನು ಗಳಿಸಿದೆ. ಹೆಚ್ಚುವರಿಯಾಗಿ, ಯುಎಇ, ಆಸ್ಟ್ರೇಲಿಯಾ, ಸೌದಿ ಅರೇಬಿಯಾ ಸೇರಿದಂತೆ ವಿದೇಶಗಳಲ್ಲಿ ಮುಂಗಡ ಟಿಕೆಟ್ ಬುಕಿಂಗ್ ಪ್ರೊಸೆಸ್ ಪ್ರಾರಂಭವಾಗಿದೆ. ಆದಾಗ್ಯೂ, ಭಾರತದಲ್ಲಿ ಕಡಿಮೆ ಸಂಖ್ಯೆಯ ಚಿತ್ರಮಂದಿರಗಳು ಮುಂಗಡ ಟಿಕೆಟ್ ಖರೀದಿಸಲು ಅನುಮತಿಸಿವೆ.