ಇತ್ತೀಚೆಗೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದ ಫೈಜ್ ಉತ್ಸವದಲ್ಲಿ ಭಾರತದ ಖ್ಯಾತ ಕವಿ, ಗೀತೆ ರಚನೆಕಾರ ಜಾವೇದ್ ಅಖ್ತರ್ ಪಾಲ್ಗೊಂಡು ಪಾಕ್ ಬಗ್ಗೆ ಹೇಳಿಕೆ ನೀಡಿದ್ದರು. 26/11ರ ಮುಂಬೈ ದಾಳಿಯ ಕುರಿತಾಗಿ ಭಾರತೀಯರ ಹೃದಯದಲ್ಲಿ ಅಡಗಿರುವ ನೋವಿನ ಬಗ್ಗೆ ಮಾತನಾಡಿದ್ದ ಜಾವೇದ್ ಅಖ್ತರ್, ಪಾಕ್ ನಡೆಯನ್ನು ಬಹಿರಂಗವಾಗಿಯೇ ಟೀಕಿಸಿದ್ದರು. ಈ ಸುದ್ದಿ ಸದ್ಯ ದೊಡ್ಡ ಮಟ್ಟಿಗೆ ಸೌಂಡ್ ಮಾಡುತ್ತಿದ್ದು, ಈ ಬಗ್ಗೆ ಸ್ವತಃ ಜಾವೇದ್ ಅಖ್ತರ್ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಕಾಮೆಂಟ್‌ಗಳನ್ನು "ಸ್ವಲ್ಪ ವಿವಾದಾತ್ಮಕ ಮತ್ತು ಸೂಕ್ಷ್ಮ" ಎಂದು ಬಣ್ಣಿಸಿದ ಜಾವೇದ್ ಅಖ್ತರ್, ಪಾಕಿಸ್ತಾನದಲ್ಲಿ ತಮ್ಮ ಅಭಿಪ್ರಾಯವನ್ನು ಹೇಳಲು ನಾನು ಹೆದರುವುದಿಲ್ಲ ಎಂದು ಹೇಳಿದರು. ಕಳೆದ ವಾರ ಖ್ಯಾತ ಉರ್ದು ಕವಿ ಫೈಜ್ ಅಹ್ಮದ್ ಫೈಜ್ ಅವರನ್ನು ಗೌರವಿಸುವ ಉತ್ಸವದಲ್ಲಿ ಭಾಗಿ ಆಗಿದ್ದ ಅಖ್ತರ್, 2008ರ ಭಯೋತ್ಪಾದಕ ದಾಳಿಯನ್ನು ಭಾರತ ಪ್ರಸ್ತಾಪಿಸಿದಾಗ ಪಾಕಿಸ್ತಾನಿಗಳು ನೊಂದುಕೊಳ್ಳಬಾರದು ಎಂದು ಹೇಳಿದ್ದರು.
ಇದು (ಅಖ್ತರ್ ಹೇಳಿಕೆ ಪರಿಣಾಮ) ಬಹಳ ದೊಡ್ಡದಾಯಿತು. ಇದು ನನಗೆ ಕೊಂಚ ಮುಜುಗರದ ಸಂಗತಿಯಾಗಿದೆ. ಸದ್ಯ ನಾನು ಅದರ ಬಗ್ಗೆ ಹಿಗ್ಗಬಾರದು ಎಂದು ಭಾವಿಸುತ್ತೇನೆ. ನಾನು ಇಲ್ಲಿಗೆ (ಭಾರತ) ಬಂದಾಗ, ನಾನು ಮೂರನೇ ಮಹಾಯುದ್ಧವನ್ನು ಗೆದ್ದಂತೆ ನನಗೆ ಅನಿಸಿತು. ಜನರು ಮತ್ತು ಮಾಧ್ಯಮಗಳಿಂದ ಹಲವಾರು ಪ್ರತಿಕ್ರಿಯೆಗಳು ಬಂದವು. ನಾನು ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ಬಳಿಕ ನಾನು ಅಂಥಹ ಯಾವ ಹೇಳಿಕೆ ಕೊಟ್ಟೆ ಎಂದು ನನಗೆ ಕೊಂಚ ಮುಜುಗರವಾಯಿತು. ಅಷ್ಟರ ಮಟ್ಟಿಗೆ ಸುದ್ದಿ ಆಯಿತು. ಪ್ರಶಂಸೆ ಸಿಕ್ಕಿತು. ನಾನು ಈ ವಿಷಯಗಳನ್ನು ಹೇಳಬೇಕಾಗಿತ್ತು. ನಾವು ಸುಮ್ಮನಿರಬೇಕೇ? ಎಂದು ಜಾವೇದ್ ಅಖ್ತರ್ ಅವರು ಎಬಿಪಿ ಐಡಿಯಾಸ್ ಆಫ್ ಇಂಡಿಯಾ 2023 ಶೃಂಗಸಭೆಯಲ್ಲಿ ಹೇಳಿದರು.