ಹಿಂದಿ ಚಿತ್ರರಂಗದ ಹಿರಿಯ ಮತ್ತು ಪ್ರಸಿದ್ಧ ಬರಹಗಾರ-ಗೀತರಚನೆಕಾರ ಜಾವೇದ್ ಅಖ್ತರ್, ಮುಕ್ತ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ಹೆಸರುವಾಸಿಯಾದವರು. ಸಮಾಜ ಮತ್ತು ದೇಶಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಇವರು ಆಗಾಗ ತಮ್ಮ ಅನಿಸಿಕೆಗಳನ್ನು ನಿರ್ಭಿಡೆಯಿಂದ ಹಂಚಿಕೊಳ್ಳುತ್ತಿರುತ್ತಾರೆ. ಶನಿವಾರ ನಡೆದ ಒಂಬತ್ತನೇ ಅಜಂತಾ-ಎಲ್ಲೋರಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ, ಇತ್ತೀಚಿಗೆ ತೆರೆಕಂಡು ಸಾಕಷ್ಟು ಮೆಚ್ಚುಗೆ ಗಳಿಸಿದ 'ಅನಿಮಲ್' ಎಂಬ ಸಿನಿಮಾ ಕುರಿತು ಅವರು ಮಾತನಾಡಿದರು.
ಇಂದಿನ ಪಾತ್ರಗಳು ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಿಸಿಲ್ಲ: ಇಂದಿನ ಚಲನಚಿತ್ರಗಳ ಪಾತ್ರಗಳು ರಾಜಕೀಯ ಅಥವಾ ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿಲ್ಲ. ಆದರೆ ಅವರ ಸ್ವಂತ ಕಥೆಗಳು ಮತ್ತು ಅನುಭವಗಳನ್ನು ಒಳಗೊಂಡಿವೆ. 60-70ರ ದಶಕದಲ್ಲಿ ಹಿಂದಿ ಚಲನಚಿತ್ರಗಳ ನಾಯಕರು ಸಾಮಾನ್ಯ ಹಿನ್ನೆಲೆಯಿಂದ ಬಂದವರು ಎಂದು ತೋರಿಸಲಾಗುತ್ತಿತ್ತು. ಇದರಲ್ಲಿ ಕಾರ್ಮಿಕರು, ಶಿಕ್ಷಕರು, ಟ್ಯಾಕ್ಸಿ ಚಾಲಕರು ಅಥವಾ ರಿಕ್ಷಾ ಚಾಲಕರು ಕೂಡ ಸೇರಿದ್ದಾರೆ. ಆದರೆ ಈಗ ಚಿತ್ರಣ ಬದಲಾಗಿದೆ. ಇಂದಿನ ಹೀರೋಗಳು ಶ್ರೀಮಂತ ಕುಟುಂಬದಿಂದ ಬಂದವರು. ಇಂದು ನಮ್ಮ ಮನಸ್ಸಿನಲ್ಲಿ ಕೌನ್ ಬನೇಗಾ ಕರೋಡ್ಪತಿ ಎಂಬ ಒಂದೇ ಒಂದು ಆಲೋಚನೆ ಇದೆ ಎಂದರು.
ಯಾವ ರೀತಿಯ ಸಿನಿಮಾ ಮಾಡಬೇಕು ಎಂಬುದಕ್ಕೆ 'ಅನಿಮಲ್' ನಲ್ಲಿನ ಪ್ರಮುಖ ದೃಶ್ಯವನ್ನು ಉಲ್ಲೇಖಿಸಿದ ಜಾವೇದ್ ಅಖ್ತರ್, ಇಂದಿನ ಕಾಲದಲ್ಲಿ ಸಿನಿಮಾ ಮಾಡುವವರಿಗಿಂತ ಸಿನಿಮಾ ವೀಕ್ಷಕರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಸಮಾಜ ಶ್ಲಾಘಿಸುವಂತಹ ಪಾತ್ರಗಳನ್ನು ರಚಿಸಲು ಬಯಸಬೇಕು. ಇದು ಯುವ ಚಲನಚಿತ್ರ ನಿರ್ಮಾಪಕರಿಗೆ ಪರೀಕ್ಷಾ ಸಮಯ ಎಂದು ನಾನು ನಂಬುತ್ತೇನೆ. ಉದಾಹರಣೆಗೆ, ಪುರುಷನು ಮಹಿಳೆಗೆ ತನ್ನ ಶೂ ನೆಕ್ಕಲು ಕೇಳುವ ಚಲನಚಿತ್ರವಿದ್ದರೆ ಅಥವಾ ಪುರುಷನು ಮಹಿಳೆಗೆ ಕಪಾಳಮೋಕ್ಷ ಮಾಡುವುದು ಸರಿ ಎಂದು ಹೇಳಿದರೆ ಅದರಲ್ಲೂ ಇಂತಹ ಚಿತ್ರ ಸೂಪರ್ ಡೂಪರ್ ಹಿಟ್ ಆಗಿದ್ದರೆ ಇಂಥ ಬೆಳವಣಿಗೆ ತುಂಬಾ ಅಪಾಯಕಾರಿ ಎಂದು ಹೇಳಿದರು.