ಇಂಡಿಯನ್ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್' ಅಂತಿವಾಗಿ ಪ್ರೇಕ್ಷಕರಿಗೆ ದರ್ಶನ ಕೊಟ್ಟಿದೆ. ನೆಲ್ಸನ್ ದಿಲೀಪ್ ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾದಲ್ಲಿ ಕನ್ನಡದ ಹಿರಿಯ ನಟ ಶಿವ ರಾಜ್ಕುಮಾರ್, ಸೌತ್ ಸೂಪರ್ ಸ್ಟಾರ್ಗಳಾದ ಮೋಹನ್ ಲಾಲ್, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ್ ರವಿ ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ. ಎರಡು ವರ್ಷಗಳ ಬ್ರೇಕ್ ಬಳಿಕ ಬಂದ ರಜನಿಕಾಂತ್ ಸಿನಿಮಾವನ್ನು ಪ್ರೇಕ್ಷಕರು ಖುಷಿಯಿಂದ ಸ್ವೀಕರಿಸಿದ್ದಾರೆ. ಸದ್ಯ ಆ್ಯಕ್ಷನ್ ಸಿನಿಮಾಗೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಮಾವನ ಸಿನಿಮಾ ವೀಕ್ಷಿಸಿದ ಅಳಿಯ ಧನುಷ್:ಥಿಯೇಟರ್ಗಳಲ್ಲಿ ಸಿನಿಮಾ ವೀಕ್ಷಿಸಿದ ತಲೈವಾನ ಕಟ್ಟಾ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಎಂದಿನಂತೆ ತೆರೆ ಮೇಲೆ ರಜನಿಯನ್ನು ಬಲು ಸಂಭ್ರಮದಿಂದ ಸ್ವೀಕರಿಸಿದ್ದಾರೆ. ಸೌತ್ ಸೂಪರ್ ಸ್ಟಾರ್, ಅಳಿಯ ಧನುಷ್ ಕೂಡ ಮೊದಲ ದಿನವೇ ಮಾವನ ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ. ಜೈಲರ್ ಸಿನಿಮಾವನ್ನು ಮೊದಲ ದಿನವೇ ಕಣ್ತುಂಬಿಕೊಂಡವರ ಪೈಕಿ ಪುತ್ರಿ ಐಶ್ವರ್ಯಾ ರಜನಿಕಾಂತ್, ಅಳಿಯ ಧನುಷ್ ಕೂಡ ಓರ್ವರು.
ಇದು ಜೈಲರ್ ವೀಕ್: ಧನುಷ್ ಅವರು ತಮ್ಮ ಮಾವ ರಜನಿಕಾಂತ್ ಅವರ ಕಟ್ಟಾ ಅಭಿಮಾನಿ. ಆಗಸ್ಟ್ 7 ರಂದು ಇದು ಜೈಲರ್ ವೀಕ್ ಎಂದು ಟ್ವೀಟ್ ಮಾಡಿದ್ದ ಧನುಷ್, ಮೊದಲ ದಿನವೇ ಸಿನಿಮಾ ನೋಡುವುದರಿಂದ ತಪ್ಪಿಸಿಕೊಂಡಿಲ್ಲ. ಮೊದಲ ದಿನ ಧನುಷ್, ಐಶ್ವರ್ಯಾ ಮಾತ್ರವಲ್ಲದೇ ರಾಘವ ಲಾರೆನ್ಸ್, ರಜನಿಕಾಂತ್ ಪತ್ನಿ ಲತಾ ಕೂಡ ಸಿನಿಮಾ ವೀಕ್ಷಿಸಿ ಸಂಭ್ರಮಿಸಿದ್ದಾರೆ.
ಚೆನ್ನೈಗೆ ಬಂದ ಜಪಾನ್ ಜೋಡಿ: ವಿಶಿಷ್ಠ ಮ್ಯಾನರಿಸಂ ಹೊಂದಿರುವ ರಜನಿಕಾಂತ್ ದೇಶ ಮಾತ್ರವಲ್ಲದೇ ವಿಶ್ವಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಫ್ಯಾನ್ಸ್ ತಮ್ಮದೇ ಆದ ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸುತ್ತಿರುತ್ತಾರೆ. ಇದೀಗ ಜಪಾನ್ ಜೋಡಿ ಜೈಲರ್ ಸಿನಿಮಾ ವೀಕ್ಷಿಸಲು ಚೆನ್ನೈಗೆ ಆಗಮಿಸಿ, ರಜನಿಕಾಂತ್ ಮೇಲೆ ಪ್ರೀತಿಯ ಧಾರೆಯೆರೆದಿದ್ದಾರೆ.