ಚೆನ್ನೈ (ತಮಿಳುನಾಡು): ಕಾಲಿವುಡ್ನ ಖ್ಯಾತ ನಟ ಕಾರ್ತಿ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 46ನೇ ವಸಂತಕ್ಕೆ ಕಾಲಿಟ್ಟ ಅವರಿಗೆ ಚಿತ್ರರಂಗದ ನಟ-ನಟಿಯರು ಹಾಗೂ ಅಭಿಮಾನಿಗಳು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಈ ಹುಟ್ಟುಹಬ್ಬದ ಹಿನ್ನೆಲೆ ಅವರ ನಟನೆಯ 'ಜಪಾನ್' ಚಿತ್ರದ ಫಸ್ಟ್ ಲುಕ್ ಟೀಸರ್ ಅನ್ನು ಬಿಡುಗಡೆ ಮಾಡುವ ಮೂಲಕ ಚಿತ್ರ ತಂಡ ಉಡುಗೊರೆ ನೀಡಿದೆ. ರಾಜು ಮುರುಗನ್ ನಿರ್ದೇಶನದ ಆ್ಯಕ್ಷನ್ ಆ್ಯಂಡ್ ಥ್ರಿಲ್ಲರ್ ಚಿತ್ರ ಇದಾಗಿದ್ದು, ಅನು ಇಮ್ಯಾನುಯೆಲ್, ಸುನಿಲ್ ಮತ್ತು ವಿಜಯ್ ಮಿಲ್ಟನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಆರ್ಥಿಕ ಇಂಧನ ತುಂಬಲು ಮುಂದಾಗಿರುವ ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆಯು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಇಂದು ಚಿತ್ರದ ಫಸ್ಟ್-ಲುಕ್ ಟೀಸರ್ ಅನ್ನು ಹಂಚಿಕೊಂಡಿದೆ. ಚಿತ್ರೀಕರಣದಲ್ಲಿರುವ ಜಪಾನ್ ಚಿತ್ರ 2023ರ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ಸಹ ಸಂಸ್ಥೆಯು ಬರೆದುಕೊಂಡಿದೆ.
ಸ್ಯಾಂಡ್ವುಡ್ ನಟ ರಿಷಬ್ ಶೆಟ್ಟಿ ತಮ್ಮ ಟ್ವಿಟರ್ ಖಾತೆಯಲ್ಲಿ 'ಜಪಾನ್' ಫಸ್ಟ್-ಲುಕ್ ಟೀಸರ್ ಅನ್ನು ರಿಲೀಸ್ ಮಾಡಿದ್ದಾರೆ. ಅಲ್ಲದೇ ಗೆಳೆಯ ಕಾರ್ತಿಗೆ ಶುಭ ಹಾರೈಸಿದ್ದಾರೆ. "ಜಪಾನ್.. ಪ್ರೀತಿಯ ಸ್ನೇಹಿತ ಕಾರ್ತಿಯ 25ನೇ ಚಿತ್ರದ ಟೀಸರ್. ಒಂದು ಅದ್ಭುತ ಜಗತ್ತಿನ ಸಣ್ಣ ತುಣುಕು. ಹುಟ್ಟುಹಬ್ಬದ ಶುಭಾಶಯಗಳು ಕಾರ್ತಿ" ಎಂದು ರಿಷಬ್ ಶೆಟ್ಟಿ ಶೀರ್ಷಿಕೆ ಬರೆದುಕೊಂಡಿದ್ದಾರೆ.
'ಜಪಾನ್' ಚಿತ್ರದಲ್ಲಿ ಕಾರ್ತಿ ಸಂಪೂರ್ಣ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿಡುಗಡೆಯಾದ ಚಿತ್ರದ ಫಸ್ಟ್-ಲುಕ್ ಟೀಸರ್ನಲ್ಲಿ ಕಾರ್ತಿ ಗುಂಗುರು ಕೂದಲು, ಮೋಜಿನ ಕನ್ನಡಕ ಮತ್ತು ಟ್ರ್ಯಾಕ್ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ತಮ್ಮ ಎರಡೂ ಕೈಗಳಲ್ಲಿ ಎರಡು ಗೋಲ್ಡನ್ ಮಷಿನ್ಗನ್ಗಳನ್ನು ಹಿಡಿದುಕೊಂಡಿರುವುದನ್ನು ಕಾಣಬಹುದು. 'ಜಪಾನ್' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಟ್ಯೂನ್ ಹಾಕಿದ್ದರೆ, ಭಾರತೀಯ ಚಿತ್ರರಂಗದ ಐಕಾನಿಕ್ ಸಿನಿಮಾಟೋಗ್ರಾಫರ್ ರವಿವರ್ಮನ್ ಕ್ಯಾಮರಾ ವರ್ಕ್ ಮಾಡಿದ್ದಾರೆ.
ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಚಿತ್ರದ ಬಳಿಕ ಕಾರ್ತಿ ಪ್ಯಾನ್ ಇಂಡಿಯಾ ನಟರಾಗಿ ಹೊರಹೊಮ್ಮಿದವರು. ಹಣ ಗಳಿಕೆಯಲ್ಲಿ ಚಿತ್ರ ಹೆಸರು ಮಾಡಿದ್ದರಿಂದ 'ಜಪಾನ್' ಚಿತ್ರ ಕೂಡ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ನಟನ ಫಸ್ಟ್ ಲುಕ್ ನೋಡಿದ ಸಿನಿಪ್ರಿಯರು ಚಿತ್ರದ ಮೇಲೆ ಭರವಸೆ ಇಟ್ಟಿದ್ದಾರೆ.
'ಜಪಾನ್' ಚಿತ್ರದಲ್ಲಿ ಕಾರ್ತಿ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಸಹ ಇದೆ. ಮೊದಲು ನಾಯಕ ನಟರಾಗಿ, ಬಳಿಮ ಹಾಸ್ಯ ನಟರಾಗಿ, ಆ ಕೊನೆಯದಾಗಿ ಖಳನಟರಾಗಿ ಮಿಂಚು ಹರಿಸಲಿದ್ದಾರೆ. ಸದ್ಯ ಸ್ಟೈಲಿಶ್ ಲುಕ್ ಹಾಗೂ ಗುಂಗುರು ಕೂದಲಿನಲ್ಲಿ ಎಂಟ್ರಿ ಕೊಟ್ಟಿರುವ ಕಾರ್ತಿ 'ಜಪಾನ್' ಸಿನಿಮಾ ಟೀಸರ್ ಕಿಕ್ ಕೊಡುತ್ತಿದೆ. ಇದೇ ಮೊಲದ ಸಲ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದನ್ನು ನೋಡಿ ಅಭಿಮಾನಿಗಳು ಸಹ ಫಿದಾ ಆಗಿದ್ದಾರೆ. ಜಾಲತಾಣದಲ್ಲಿ ನೆಟಿಜನ್ಸ್ ಕಾಮೆಂಟ್ ಮಾಡುವ ಮೂಲಕ ಚಿತ್ರದ ಕ್ರೇಜ್ ಹೆಚ್ಚಿಸುತ್ತಿದ್ದಾರೆ.
ಇದನ್ನೂ ಓದಿ:'ಮಿಸ್ಟರ್ ಆ್ಯಂಡ್ ಮಿಸಸ್ ರಾಜಾಹುಲಿ' ಚಿತ್ರದ ಮೂಲಕ ನಾಯಕ ನಟರಾದ ಹೊನ್ನರಾಜ್