ಮುಂಬೈ, ಮಹಾರಾಷ್ಟ್ರ:ಭಾರತದಲ್ಲಿನ ಜಪಾನ್ ರಾಯಭಾರಿ ಹಿರೋಷಿ ಸುಜುಕಿ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 17 ಸೆಕೆಂಡುಗಳ ಈ ಡ್ಯಾನ್ಸ್ ವಿಡಿಯೋ ರಾಯಭಾರಿ ಹಿರೋಷಿ ಸುಜುಕಿ ಅವರು ಸಾಮಾಜಿಕ ಜಾಲತಾಣವಾದ ಎಕ್ಸ್ ಅಥವಾ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಅಷ್ಟೇ ಅಲ್ಲ ಈ ವಿಡಿಯೋದಲ್ಲಿ ಜಪಾನಿನ ಯೂಟ್ಯೂಬರ್ ಮೈಯೋ ಸ್ಯಾನ್ ಕೂಡ ಹಿರೋಷಿ ಸುಜುಕಿಯೊಂದಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಹಿರೋಷಿ ಸುಜುಕಿ ರಜನಿಕಾಂತ್ ಅವರಂತೆ ಸ್ಪೆಕ್ಟ್ ಧರಿಸುವುದನ್ನು ನಕಲು ಮಾಡಲು ಯತ್ನಿಸಿರುವುದು ವಿಡಿಯೋದಲ್ಲಿ ಕಾಣ ಬಹುದಾಗಿದೆ.
ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಚಿತ್ರ ಈಗಾಗಲೇ ಪ್ರಪಂಚಾದ್ಯಂತ ಭರ್ಜರಿ ಯಶಸ್ಸು ಕಾಣುತ್ತಿದೆ. ಈ ಚಿತ್ರದ Kaavaalaa ಹಾಡಿಗೆ ಮಿಲ್ಕಿ ಬ್ಯೂಟಿ ತಮನ್ನಾ ಬಾಟಿಯಾ ಮೈ ಬಳುಕಿಸಿದ್ದಾರೆ. Kaavaalaa ಹಾಡಿಗೆ ಹಿರೋಷಿ ಸುಜುಕಿ ಅವರು ಜಪಾನಿನ ಯೂಟ್ಯೂಬರ್ ಮೇಯೊ ಸ್ಯಾನ್‌ನೊಂದಿಗೆ ಕುಣಿದಿದ್ದಾರೆ. ಈ ಡ್ಯಾನ್ಸ್ ಮಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದರೊಂದಿಗೆ ಕೆಲವೊಂದು ಅನಿಸಿಕೆಗಳನ್ನು ಬರೆದು ಹಂಚಿಕೊಂಡಿದ್ದಾರೆ ಹಿರೋಷಿ ಸುಜುಕಿ.
ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಹಿರೋಷಿ ಅವರು, ರಜನಿಕಾಂತ್ ಮೇಲಿನ ನನ್ನ ಪ್ರೀತಿ ಮತ್ತು ಅಭಿಮಾನ ಮುಂದುವರಿದಿದೆ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಪೋಸ್ಟ್‌ನಲ್ಲಿ ರಜನಿಕಾಂತ್ ಅವರನ್ನು ಟ್ಯಾಗ್ ಮಾಡಿರುವ ಅವರು ಹೊಸ ಚಿತ್ರ ಜೈಲರ್ ಹೆಸರನ್ನೂ ಬರೆದಿದ್ದಾರೆ. ಕೆಲ ಗಂಟೆಗಳ ಹಿಂದೆ ಹಂಚಿಕೊಂಡ ಈ ವಿಡಿಯೋಗೆ ಸುಮಾರು 2000ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ ಮತ್ತು 8000 ಕ್ಕೂ ಹೆಚ್ಚು ನೆಟ್ಟಿಗರು ಲೈಕ್ ಮಾಡಿದ್ದಾರೆ.
ಜುಲೈ ಕೊನೆಯ ವಾರದಲ್ಲಿ, ಭಾರತ-ಜಪಾನ್ ಫೋರಂನಲ್ಲಿ ಭಾಗವಹಿಸಲು ನವದೆಹಲಿಗೆ ಬಂದಿದ್ದ ಜಪಾನ್ ವಿದೇಶಾಂಗ ಸಚಿವ ಯೋಶಿಮಾಸಾ ಹಯಾಶಿ ಅವರು ರಾಜಮೌಳಿ ನಿರ್ದೇಶನದ ಮತ್ತು ರಾಮ್ ಚರಣ ಹಾಗೂ ಎನ್ಟಿಆರ್ ಅವರ ಅದ್ಭುತ ಅಭಿನಯದ ಆರ್ಆರ್ಆರ್ ಸಿನಿಮಾ ಬಗ್ಗೆ ಹೊಗಳಿದ್ದರು.
ಆಗ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹಯಾಶಿ ಅವರು, ಟೋಕಿಯೊದಿಂದ ದೆಹಲಿಗೆ ಆಗಮಿಸುತ್ತಿದ್ದ ವೇಳೆ ಪೌರಾಣಿಕ ಚಲನಚಿತ್ರ RRR ಅನ್ನು ವೀಕ್ಷಿಸಿದ್ದೇನೆ. ನನಗೆ ಆ ಚಿತ್ರ ತುಂಬಾನೇ ಇಷ್ಟವಾಯ್ತು. ರಾಮಚರಣ್ ಮತ್ತು ಜೂನಿಯರ್ ಎನ್ಟಿಆರ್ ಎಂದರೆ ನನಗೆ ತುಂಬಾ ಇಷ್ಟ ಎಂದರು. ನಾಟು-ನಾಟು ಹಾಡಿಗೆ ಹಯಾಶಿ ಅವರು ಕುಣಿಯಲು ಮುಂದಾದಾಗ ಆ ವೇದಿಕೆಯಲ್ಲಿದ್ದ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ನೃತ್ಯ ಮಾಡಲು ನಗುತ್ತಲೇ ನಿರಾಕರಿಸಿದ್ದರು.
ಓದಿ:Jailer Collection: ವಿಶ್ವಾದ್ಯಂತ ಜೈಲರ್ ಅಬ್ಬರ - 400 ಕೋಟಿ ಗಳಿಕೆಯತ್ತ ರಜಿನಿ ಸಿನಿಮಾ!