ಕೆಲ ತಿಂಗಳ ಹಿಂದೆ ರಶ್ಮಿಕಾ ಮಂದಣ್ಣ, ಆಲಿಯಾ ಭಟ್ ಅವರಂತಹ ಖ್ಯಾತ ತಾರೆಯರ ಡೀಪ್‌ಫೇಕ್ ಫೋಟೋ - ವಿಡಿಯೋಗಳು ವೈರಲ್ ಆಗಿ ಸಂಚಲನ ಸೃಷ್ಟಿಸಿತ್ತು. ಈ ವಿಡಿಯೋ ಕಂಡು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಸಮಾಧಾನ, ಬೇಸರ ಹೊರಹಾಕಿದ್ದರು. ಕಿಡಿಗೇಡಿಗಳ ಈ ಕೃತ್ಯವನ್ನು ಕಟುವಾಗಿ ಟೀಕಿಸಿದ್ದರು. ಈ 'ಡೀಪ್‌ಫೇಕ್ ಫೋಟೋ-ವಿಡಿಯೋ' ಬಗ್ಗೆ ಇದೀಗ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಮೌನ ಮುರಿದಿದ್ದಾರೆ.
'ದೇವರ' ಸಿನಿಮಾ ಮೂಲಕ ದಕ್ಷಿಣ ಚಿತ್ರರಂಗ ಪ್ರವೇಶಿಸಲು ಸಜ್ಜಾಗಿರುವ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇತ್ತೀಚಿನ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ತಮ್ಮ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ಮಾರ್ಫ್ ಮಾಡಿದ ಫೋಟೋಗಳನ್ನು ನೋಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಗಮನ ಸೆಳೆಯುವ ವ್ಯಕ್ತಿ (attention-seeking) ಎಂದು ಜನರು ಗ್ರಹಿಸಬಹುದೆಂಬ ಭಯದಿಂದಾಗಿ ಮೌನವಾಗಿರಲು ನಿರ್ಧರಿಸಿದೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.
ತಮ್ಮ ನಂಬಿಕೆಗಳು, ದೃಷ್ಟಿಕೋನಗಳ ಬಗ್ಗೆ ನಿರಂತರವಾಗಿ ಮಾತನಾಡುತ್ತಾ ಬಂದಿರುವ ನಟಿ ಜಾಹ್ನವಿ ಕಪೂರ್, ಹದಿಹರೆಯದ ಸಂದರ್ಭ 'ಮಾರ್ಫಿಂಗ್ ಫೋಟೋ'ಗಳಿಗೆ ಬಲಿಯಾಗಿದ್ದೇನೆ ಎಂಬುದನ್ನೀಗ ಬಹಿರಂಗಪಡಿಸಿಸಿದ್ದಾರೆ. ಇದೇ ಸಂದರ್ಶನದಲ್ಲಿ, ಇಂಥದ್ದೇ ಘಟನೆ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ ಅವರ ನಡೆಯನ್ನು ಶ್ಲಾಘಿಸಿದ್ದಾರೆ. ಜನರು ಇಂತಹ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಕೂಡ ಹೇಳಿದ್ದಾರೆ.
ತನ್ನ ಜೀವನದುದ್ದಕ್ಕೂ ತನ್ನ ಹೋರಾಟಗಳನ್ನು ನಿರಂತರವಾಗಿ ಎದುರಿಸುತ್ತಾ, ಪರವಾಗಿಲ್ಲ ಎಂದುಕೊಳ್ಳುತ್ತಾ ಬಂದೆ. ಜನರು ಇದಕ್ಕಿಂತ ಹೆಚ್ಚು ಅನುಭವಿಸುತ್ತಿದ್ದಾರೆ ಎಂದುಕೊಂಡಿದೆ. ಪರಿಣಾಮ, ತನ್ನ ಭಾವನೆಗಳಿಗೆ ಹೆಚ್ಚು ಮಹತ್ವ ಕೊಡಲು ಸಾಧ್ಯವಾಗಲಿಲ್ಲ, ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ ಎಂಬುದನ್ನು ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.