ಭಾರತದ ಅತ್ಯಂತ ಪ್ರಸಿದ್ಧ ನಟ ರಜನಿಕಾಂತ್ ಅವರ ಜೈಲರ್ ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ನೆಲ್ಸನ್ ದಿಲೀಪ್ ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಗಲ್ಲಾಪೆಟ್ಟಿಗೆ ಅಂಕಿ ಅಂಶ ಎಲ್ಲರ ಹುಬ್ಬೇರುವಂತೆ ಮಾಡಿದೆ. ತಲೈವಾ 2 ವರ್ಷಗಳ ಬ್ರೇಕ್ ಬಳಿಕ ಜೈಲರ್ನೊಂದಿಗೆ ಪರದೆ ಮೇಲೆ ಬಂದಿದ್ದು, 2023ರ ಬ್ಲಾಕ್ಬಸ್ಟರ್ ಚಿತ್ರವಾಗಿ ಹೊರಹೊಮ್ಮಿದೆ. ಈ ಹೊತ್ತಿನಲ್ಲಿ ರಜನಿಕಾಂತ್ ಮುಖ್ಯಭೂಮಿಕೆಯ ಮುಂದಿನ ಸಿನಿಮಾ ಶೂಟಿಂಗ್ ಶುರುವಾಗಿದೆ.
ಜೈಲರ್ ಸಕ್ಸಸ್ ಸೆಲೆಬ್ರೇಶನ್:ಜೈಲರ್ ಈ ಹಿಂದಿನ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ರಜನಿ ಮುಖ್ಯಭೂಮಿಕೆಯ ಈ ಸಿನಿಮಾ ಜಗತ್ತಿನಾದ್ಯಂತ 500 ಕೋಟಿಗೂ ಹೆಚ್ಚು ಸಂಪಾದನೆ ಮಾಡುವಲ್ಲಿ ಯಶ ಕಂಡಿದೆ. ಈ ಸಂಖ್ಯೆ ರಜನಿಕಾಂತ್ ಅವರ ಸ್ಟಾರ್ಡಮ್ ಎಷ್ಟಿದೆ, ಹೇಗಿದೆ ಎಂಬುದನ್ನು ಒತ್ತಿ ಹೇಳುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಸಿನಿಪ್ರಿಯರಿಂದ ಸಾಕಷ್ಟು ಪ್ರೀತಿ, ಬೆಂಬಲ ಪಡೆಯುತ್ತಿರುವ ಈ ಹೊತ್ತಿನಲ್ಲಿ ನಾಯಕ ನಟ ರಜನಿಕಾಂತ್ ಅವರು ತಮ್ಮ ಚಿತ್ರತಂಡದೊಂದಿಗೆ ಚೆನ್ನೈನಲ್ಲಿ ಸಿನಿಮಾ ಸಕ್ಸಸ್ನ ಸೆಲೆಬ್ರೇಶನ್ ಮಾಡಿದ್ದಾರೆ.
ಚಿತ್ರತಂಡದವರೊಂದಿಗೆ ಕೇಕ್ ಕತ್ತರಿಸಿದ ರಜನಿ: ಹಿರಿಯ ನಟ ರಜನಿಕಾಂತ್ ಅವರು ತಮ್ಮ ಜೈಲರ್ ಸಿನಿಮಾ ತೆರೆಕಾಣುವ ಮುನ್ನಾದಿನದಂದು ಆಧ್ಯಾತ್ಮಿಕ ಪ್ರವಾಸ ಕೈಗೊಂಡರು. ಪ್ರಯಾಣದ ವೇಳೆ ಗಣ್ಯರನ್ನೂ ಸಹ ಭೇಟಿ ಆಗಿ ಗಮನ ಸೆಳೆದರು. ಆಧ್ಯಾತ್ಮಿಕ ಪ್ರಯಾಣ ಮುಗಿಸಿ ಇತ್ತೀಚೆಗೆ ಚೆನ್ನೈಗೆ ವಾಪಸ್ಸಾಗಿದ್ದು, ಜೈಲರ್ ಯಶಸ್ಸನ್ನು ಆಚರಿಸಲು ತಮ್ಮ ತಂಡದೊಂದಿಗೆ ಸೇರಿಕೊಂಡರು. ಜೈಲರ್ ಸಿನಿಮಾ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್, ಸಂಗೀತ ಸಂಯೋಜಕ ಅನಿರುಧ್ ರವಿಚಂದರ್, ನಟಿ ರಮ್ಯಾ ಕೃಷ್ಣನ್ ಸೇರಿದಂತೆ ಚಿತ್ರತಂಡದವರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು. 72ರ ಹಿರಿಯ ನಟನ ಸುತ್ತಲೂ ನಗುಮೊಗದಲ್ಲಿ ಚಿತ್ರತಂಡದವರು ಸುತ್ತುವರಿದಿದ್ದರು. ಬಳಿಕ ಕೇಕ್ ಕತ್ತರಿಸಿ ಸಕ್ಸಸ್ ಸೆಲೆಬ್ರೇಶನ್ ಮಾಡಿದ್ದಾರೆ.