ಈ ಚಿತ್ರರಂಗದಲ್ಲಿ ಒಂದು ಸಿನಿಮಾ ಸೂಪರ್ ಹಿಟ್ ಆದಾಗ ಸಿನಿಮಾದ ನಾಯಕನಿಗೆ, ನಿರ್ದೇಶಕನಿಗೆ ಹಾಗು ನಾಯಕಿಗೆ ಅಭಿನಂದನೆಗಳನ್ನು ಹೇಳುವುದು ಸಾಮಾನ್ಯ. ಆದರೆ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ ನಟನಿಗೆ ಜೈಕಾರಗಳನ್ನು ಹಾಕಿ ಉಡುಗೊರೆಗಳನ್ನು ಕೊಡೋದು ತೀರ ಅಪರೂಪ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದ ಹವಾ ಜೋರಾಗಿದೆ.
ತಂದೆ ಮಗನ ಬಾಂಧವ್ಯದ ಜೊತೆಗೆ ಜಬರ್ದಸ್ತ್ ಆ್ಯಕ್ಷನ್ ಕಥಾ ಹಂದರ ಹೊಂದಿರುವ ಜೈಲರ್ ಚಿತ್ರ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ತಲೈವಾ ಜೊತೆ ಮೊದಲ ಬಾರಿಗೆ ಸ್ಕ್ರೀನ್ ಹಂಚಿಕೊಂಡಿರುವ ನಟ ಶಿವರಾಜಕುಮಾರ್ ಅವರ ಅತಿಥಿ ಪಾತ್ರಕ್ಕೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹ್ಯಾಟ್ರಿಕ್ ಹೀರೋ ಕೂಡ ವಿಡಿಯೋ ಮೂಲಕ ಅಭಿಮಾನಿಗಳಿಗೆ ಕೃತಜ್ಞತೆ ಹೇಳಿದ್ದಾರೆ.
ಜೈಲರ್ ಸಿನಿಮಾದಲ್ಲಿ ನರಸಿಂಹ ಹೆಸರಿನ ಅತಿಥಿ ಪಾತ್ರದಲ್ಲಿ ಶಿವರಾಜಕುಮಾರ್ ನಟಿಸಿದ್ದಾರೆ. ತೆರೆಯ ಮೇಲೆ ಕೆಲವು ನಿಮಿಷಗಳಷ್ಟೇ ಶಿವರಾಜಕುಮಾರ್ ಕಾಣಿಸಿಕೊಳ್ಳುತ್ತಾರೆ. ಆದರೂ ಅವರ ಪಾತ್ರಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ತಮಿಳು ಸಿನಿಮಾ ಪ್ರೇಮಿಗಳು ಸಹ ಶಿವರಾಜಕುಮಾರ್ ಅವರ ಮಾಸ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ಜೈಲರ್ ಸಿನಿಮಾದಲ್ಲಿನ ಇತರೆ ಅತಿಥಿ ಪಾತ್ರಗಳನ್ನು ಬಿಟ್ಟು ಶಿವಣ್ಣನ ಪಾತ್ರವನ್ನಷ್ಟೇ ಮೆಚ್ಚಿ ಕೊಂಡಾಡುತ್ತಿದ್ದಾರೆ.