ಕಾಲಿವುಡ್ ಹಿರಿಯ ನಟ ರಜನಿಕಾಂತ್ ಮುಖ್ಯಭೂಮಿಕೆಯ 'ಜೈಲರ್' ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ. ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿರುವ ಈ ಸಿನಿಮಾ ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಆಗಸ್ಟ್ 10 ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿರುವ 'ಜೈಲರ್' ಜಾಗತಿಕ ಬಾಕ್ಸ್ ಆಫೀಸ್ನಲ್ಲಿ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ರಜನಿಕಾಂತ್ ಅವರ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಗಳಿಸಿದ ಸಿನಿಮಾಗಳಲ್ಲಿ ಇದು ಒಂದಾಗಿದೆ.
16 ದಾಖಲೆ ಬರೆದ 'ಜೈಲರ್': ಸಿನಿಮಾ ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ 'ಜೈಲರ್' ಸಿನಿಮಾದ ಬಾಕ್ಸ್ ಆಫೀಸ್ ದಾಖಲೆಯ ಮಾಹಿತಿಯನ್ನು ಒದಗಿಸಿದ್ದಾರೆ. ತಮಿಳುನಾಡಿನಲ್ಲಿ ನಂಬರ್ ಒನ್ ಸಿನಿಮಾ ಎಂಬ ಸ್ಥಾನಮಾನವನ್ನು ಜೈಲರ್ ಪಡೆದುಕೊಂಡಿದೆ. ಇದು ತವರು ರಾಜ್ಯದಲ್ಲಿ ಚಿತ್ರದ ಮೇಲಿನ ಅಪಾರ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತದೆ. ಇದಲ್ಲದೇ, ತೆಲುಗು ಮಾತನಾಡುವ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ತಮಿಳು ಚಿತ್ರಗಳಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.
ಅಭೂತಪೂರ್ವ ಯಶಸ್ಸು ಕಂಡ 'ಜೈಲರ್': ಬಾಕ್ಸ್ ಆಫೀಸ್ನಲ್ಲಿ 16 ದಾಖಲೆ ಬರೆದ ರಜನಿ ಸಿನಿಮಾ
ಚಿತ್ರವು ರಾಜ್ಯದ ಗಡಿಗಳನ್ನು ಮೀರಿ ಸೂಪರ್ ಹಿಟ್ ಆಗಿದೆ. ಕೇರಳ ಮತ್ತು ಕರ್ನಾಟಕದಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ. ಇದು ರಜನಿಕಾಂತ್ ಅವರ ಪ್ಯಾನ್ ಇಂಡಿಯಾ ಸಿನಿಮಾಗೆ ಸಿಕ್ಕಿದ ಅದ್ಭುತ ಪ್ರತಿಕ್ರಿಯೆಯನ್ನು ಬಿಂಬಿಸುತ್ತದೆ. ಅಂತಾರಾಷ್ಟ್ರೀಯವಾಗಿ ಜೈಲರ್ ದಾಖಲೆಗಳನ್ನು ಬರೆದಿದೆ. ಉತ್ತರ ಅಮೆರಿಕದಲ್ಲಿ ಚಿತ್ರವು ಸಾರ್ವಕಾಲಿಕ ನಂಬರ್ ಒನ್ ತಮಿಳು ಚಲನಚಿತ್ರಕ್ಕಾಗಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಯುನೈಟೆಡ್ ಕಿಂಗ್ಡಮ್ ಕೂಡ ಜೈಲರ್ ಅನ್ನು ಸಾರ್ವಕಾಲಿಕ ಮೆಚ್ಚಿನ ತಮಿಳು ಚಿತ್ರವೆಂದು ಸ್ವೀಕರಿಸಿದೆ.
ಅಭೂತಪೂರ್ವ ಯಶಸ್ಸು ಕಂಡ 'ಜೈಲರ್': ಬಾಕ್ಸ್ ಆಫೀಸ್ನಲ್ಲಿ 16 ದಾಖಲೆ ಬರೆದ ರಜನಿ ಸಿನಿಮಾ
ಇದನ್ನೂ ಓದಿ:ರಜನಿಕಾಂತ್ ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿನಿಮಾ ನಟ: ಎಷ್ಟು ಕೋಟಿ ಗೊತ್ತೇ?
ಅರಬ್ ಸ್ಟೇಟ್ಸ್ ಚಲನಚಿತ್ರದ ಬಗ್ಗೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಅಲ್ಲಿಯೂ ಸಾರ್ವಕಾಲಿಕ ನಂಬರ್ ಒನ್ ದಕ್ಷಿಣ ಭಾರತದ ಭಾಷೆಯ ಚಲನಚಿತ್ರವಾಗಿ ಸ್ಥಾನವನ್ನು ಪಡೆದುಕೊಂಡಿದೆ. ಮಲೇಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಜೈಲರ್ ಅತಿ ಹೆಚ್ಚು ಗಳಿಕೆ ಮಾಡಿದ ಭಾರತದ ಸಿನಿಮಾವಾಗಿದೆ. ಸಿಂಗಾಪುರ ಮತ್ತು ಫ್ರಾನ್ಸ್ನಲ್ಲಿ ಇದು ತಮಿಳು ಚಲನಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಸೌದಿ ಅರೇಬಿಯಾದಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಿ ಜೈಲರ್ ಹೊರಹೊಮ್ಮಿದೆ.
ಅಭೂತಪೂರ್ವ ಯಶಸ್ಸು ಕಂಡ 'ಜೈಲರ್': ಬಾಕ್ಸ್ ಆಫೀಸ್ನಲ್ಲಿ 16 ದಾಖಲೆ ಬರೆದ ರಜನಿ ಸಿನಿಮಾ
ಇದಲ್ಲದೇ ಜೈಲರ್ ಚಿತ್ರವು ಸಾಗರೋತ್ತರ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಲನಚಿತ್ರವಾಗಿ ಹೊರಹೊಮ್ಮಿದೆ. ವಿಶ್ವದಾದ್ಯಂತ 600 ಕೋಟಿ ರೂಪಾಯಿಗಳನ್ನು ದಾಟಿದ ಎರಡನೇ ಅತಿ ವೇಗದ ತಮಿಳು ಚಲನಚಿತ್ರ ಎಂಬ ವಿಶೇಷ ಮೈಲಿಗಲ್ಲನ್ನು ಸಾಧಿಸಿದೆ. ಇದಕ್ಕೂ ಮೊದಲು ರಜನಿಕಾಂತ್ ನಟನೆಯ 2018ರಲ್ಲಿ ತೆರೆಕಂಡ 2.0 ಮಾತ್ರ ಇದಕ್ಕೂ ಹೆಚ್ಚು ಕಲೆಕ್ಷನ್ ಮಾಡಿದೆ. ಮನೋಬಾಲಾ ವಿಜಯಬಾಲನ್ ಅವರ ಇತ್ತೀಚೆಗಿನ ಅಪ್ಡೇಟ್ನಂತೆ ಜೈಲರ್ ವಿಶ್ವದಾದ್ಯಂತ ಒಟ್ಟು 637 ಕೋಟಿ ರೂಪಾಯಿ ಗಳಿಸಿದೆ. ನಾಲ್ಕನೇ ವಾರವೂ ಉತ್ತಮ ಪ್ರದರ್ಶವನ್ನು ಮುಂದುವರೆಸಿದೆ. ಸ್ಯಾಕ್ನಿಲ್ ವರದಿ ಪ್ರಕಾರ, ಭಾರತದಲ್ಲಿ ಜೈಲರ್ ಚಿತ್ರವು ಎಲ್ಲಾ ಭಾಷೆಗಳನ್ನು ಸೇರಿ ಅಂದಾಜು 335 ಕೋಟಿ ಸಂಗ್ರಹಿಸಿದೆ.
ಅಭೂತಪೂರ್ವ ಯಶಸ್ಸು ಕಂಡ 'ಜೈಲರ್': ಬಾಕ್ಸ್ ಆಫೀಸ್ನಲ್ಲಿ 16 ದಾಖಲೆ ಬರೆದ ರಜನಿ ಸಿನಿಮಾ
ಇದನ್ನೂ ಓದಿ:ರಜನಿಕಾಂತ್‌ಗೆ BMW ಕಾರು ಗಿಫ್ಟ್ ನೀಡಿದ 'ಜೈಲರ್' ನಿರ್ಮಾಪಕ ಕಲಾನಿಧಿ ಮಾರನ್