ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಚಿತ್ರ 'ಜೈಲರ್'. ಸೆಟ್ಟೇರಿದಾಗಿನಿಂದಲೂ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಸಿನಿಮಾ ಆಗಸ್ಟ್ನಲ್ಲಿ ತೆರೆಕಾಣಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಚಾರ ಪ್ರಾರಂಭಿಸಲು ರೆಡಿಯಾಗಿದೆ. ಚೆನ್ನೈನಲ್ಲಿ ಅದ್ಧೂರಿಯಾಗಿ ಆಡಿಯೋ ಲಾಂಚ್ ಈವೆಂಟ್ ನಡೆಸುವ ಮೂಲಕ ತಲೈವಾ ಅಭಿಮಾನಿಗಳನ್ನು ಸಂತೋಷಪಡಿಸಲು ಚಿತ್ರ ತಯಾರಕರು ಸಿದ್ಧರಾಗಿದ್ದಾರೆ. 'ಜೈಲರ್'ನ ಸಂಗೀತವನ್ನು ತಮಿಳು ಚಿತ್ರರಂಗದ ಬಹುಬೇಡಿಕೆಯ ಸಂಯೋಜಕ ಅನಿರುಧ್ ರವಿಚಂದರ್ ಸಂಯೋಜಿಸಿದ್ದಾರೆ.
ರಜನಿಕಾಂತ್ ಅಭಿನಯದ ಸಿನಿಮಾ ಸನ್ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಾಣಗೊಳ್ಳುತ್ತಿದ್ದು, ಇಂದು ಚಿತ್ರದ ಆಡಿಯೋ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಜೈಲರ್ ಆಡಿಯೋ ಜುಲೈ 28ರಂದು ಅನಾವರಣಗೊಳ್ಳಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದೆ. ತಲೈವಾ ಅಭಿಮಾನಿಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ, ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಗ್ರ್ಯಾಂಡ್ ಈವೆಂಟ್ ಅನ್ನು ಆಯೋಜಿಸಲಾಗುತ್ತಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಚಿತ್ರತಂಡ ನಿರೀಕ್ಷಿಸಿದೆ.
ಜೈಲರ್ ಆಡಿಯೋ ಲಾಂಚ್ ಈವೆಂಟ್‌ಗೆ ನೀವೂ ಕೂಡ ಟಿಕೆಟ್ ಖರೀದಿಸಿ ಹೋಗಬಹುದು. ಟಿಕೆಟ್ ದರವನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲವಾದರೂ, 500 ರೂ.ನಿಂದ ಪ್ರಾರಂಭವಾಗಬಹುದು ಎಂದು ಕೆಲ ವರದಿಗಳು ಹೇಳಿವೆ. ಹೆಚ್ಚುವರಿಯಾಗಿ, ಈವೆಂಟ್‌ಗೆ ಹೋಗಲು ಚಿತ್ರ ತಯಾರಕರು 1000 ಉಚಿತ ಪಾಸ್‌ಗಳನ್ನು ಘೋಷಿಸಿದ್ದಾರೆ. ಆಡಿಯೋ ಲಾಂಚ್ ಈವೆಂಟ್ನಲ್ಲಿ ಪಾಲ್ಗೊಳ್ಳಲು ಬಯಸುವ ಅಭಿಮಾನಿಗಳು ಉಚಿತ ಪಾಸ್‌ಗಳಿಗಾಗಿ, ಸೋಮವಾರ (ನಾಳೆ) ಮಧ್ಯಾಹ್ನ 1 ಗಂಟೆಗೆ ಟ್ವೀಟರ್ನಲ್ಲಿ ಚಿತ್ರ ತಯಾರಕರು ಒದಗಿಸುವ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದು.
ಜೈಲರ್ ಆಡಿಯೋ ಲಾಂಚ್ ಈವೆಂಟ್ ವಿವರ:
- ದಿನಾಂಕ: ಜುಲೈ 28, 2023
- ಸ್ಥಳ: ನೆಹರು ಇಂಡೋರ್ ಸ್ಟೇಡಿಯಂ, ಚೆನ್ನೈ
- ಸಮಯ: ಸಂಜೆ 4 ಗಂಟೆಯಿಂದ ಪ್ರಾರಂಭ
- ಉಚಿತ ಪಾಸ್‌ಗಳಿಗಾಗಿ ನೋಂದಣಿ: ಜುಲೈ 24, ಮಧ್ಯಾಹ್ನ 1 ಗಂಟೆಗೆ ಸೋಷಿಯಲ್ ಮೀಡಿಯಾದಲ್ಲಿ ಲಿಂಕ್ ಲಭ್ಯ