ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ರೆಡಿನ್ ಕಿಂಗ್ಸ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಚೆನ್ನೈ ಮೂಲದ ಕಿರುತೆರೆ ಕಲಾವಿದೆ ಸಂಗೀತಾ ಜೊತೆ ಭಾನುವಾರ ಹೊಸ ಜೀವನ ಆರಂಭಿಸಿದ್ದಾರೆ. ಈ ಜೋಡಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕುಟುಂಬಸ್ಥರು ಹಾಗೂ ಕೆಲವೇ ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವಿವಾಹಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗುತ್ತಿವೆ. ಅಭಿಮಾನಿಗಳು ನವದಂಪತಿಗೆ ವೈವಾಹಿಕ ಜೀವನಕ್ಕೆ ಶುಭಾಶಯ ಕೋರುತ್ತಿದ್ದಾರೆ.
'ಜೈಲರ್'ನಲ್ಲಿ ಪ್ರೇಕ್ಷಕರನ್ನು ರಂಜಿಸಿದ ಹಾಸ್ಯ ನಟ: ತಮ್ಮದೇ ಶೈಲಿಯ ಹಾಸ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ರೆಡಿನ್ ಕಿಂಗ್ಸ್ಲಿ, ಇತ್ತೀಚೆಗೆ ತೆರೆ ಕಂಡ 'ಜೈಲರ್' ಸಿನಿಮಾದ ಮೂಲಕ ಸಿನಿ ಪ್ರೇಮಿಗಳಿಗೆ ಮತ್ತಷ್ಟು ಹತ್ತಿರವಾದರು. ಈ ಚಿತ್ರದಲ್ಲಿ ತಮ್ಮ ಕಾಮಿಡಿ ಟೈಮಿಂಗ್ ಮೂಲಕ ನೋಡುಗರನ್ನು ರಂಜಿಸಿದರು. ಲೇಡಿ ಸೂಪರ್ಸ್ಟಾರ್ ನಯನತಾರಾ ಮುಖ್ಯಭೂಮಿಕೆಯ ತಮಿಳು ಸಿನಿಮಾ 'ಕೋಲಮೌ ಕೋಕಿಲಾ' ಮೂಲಕ ಹಾಸ್ಯ ನಟನಾಗಿ ರೆಡಿನ್ ಕಿಂಗ್ಸ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು.
ನಂತರ ಶಿವ ಕಾರ್ತಿಕೇಯನ್ ಅಭಿನಯದ ಕ್ರೇಜಿ ಕಾಮಿಡಿ ಚಿತ್ರ 'ಡಾಕ್ಟರ್'ನಲ್ಲಿನ ಅಭಿನಯಕ್ಕಾಗಿ ಅವರು ಅತ್ಯುತ್ತಮ ಹಾಸ್ಯ ನಟ ವಿಭಾಗದಲ್ಲಿ 'ಸೈಮಾ' ಪ್ರಶಸ್ತಿಯನ್ನು ಪಡೆದರು. ಬಳಿಕ ದಳಪತಿ ವಿಜಯ್ ಅವರ 'ಬೀಸ್ಟ್', ವಿಜಯ್ ಸೇತುಪತಿ ನಟನೆಯ 'ಕಥುವಕುಲ ರಂಡು ಕಾದಲ್' ಹೀಗೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಎಲ್ಲಾ ಸಿನಿಮಾಗಳಿಂದಾಗಿ ರೆಡಿನ್ ಕಿಂಗ್ಸ್ಲಿ ಭಾರತದಾದ್ಯಂತ ಖ್ಯಾತರಾಗಿದ್ದಾರೆ. 'ಜೈಲರ್' ಸಿನಿಮಾದಿಂದ ವಿಶ್ವದಾದ್ಯಂತ ತಮ್ಮ ನಗೆ ಚಟಾಕಿಯನ್ನು ಹಾರಿಸಿದ್ದಾರೆ.