ನವರಸನಾಯಕ ಜಗ್ಗೇಶ್ ಹಾಗೂ ಡಾಲಿ ಧನಂಜಯ್ ಮುಖ್ಯಭೂಮಿಕೆಯಲ್ಲಿರುವ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ತೋತಾಪುರಿ 2'. ಸದ್ಯ ಪೋಸ್ಟರ್ ಹಾಗೂ ಟ್ರೇಲರ್ನಿಂದಲೇ ಕುತೂಹಲ ಹುಟ್ಟಿಸಿರುವ ಚಿತ್ರ ಇದೇ ಸೆಪ್ಟೆಂಬರ್ 28ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಗೌರಿ ಗಣೇಶ ಹಬ್ಬಕ್ಕೆ ಅನಾವರಣಗೊಂಡ ಟ್ರೇಲರ್ ಹಾಸ್ಯ ಪ್ರಿಯರಿಗೆ ಸಖತ್ ಕಿಕ್ ಕೊಡುತ್ತಿದೆ.
ಜಗ್ಗೇಶ್ ಹಾಗೂ ಅದಿತಿ ಪ್ರಭುದೇವ ಉರ್ದು ಲವ್ ಟ್ರ್ಯಾಕ್ ಒಂದು ಕಡೆಯಾದ್ರೆ, ಡಾಲಿ ಮತ್ತು ಸುಮನ್ ರಂಗನಾಥ್ ಲವ್ ಸ್ಟೋರಿ ತುಂಬಾ ಚೆನ್ನಾಗಿದೆ. ವಿಜಯ್ ಪ್ರಸಾದ್ ನಿರ್ದೇಶನ ಹಾಗೂ ಕೆ ಎ ಸುರೇಶ್ ಅದ್ಧೂರಿ ನಿರ್ಮಾಣದ 'ತೋತಾಪುರಿ 2' ಚಿತ್ರದ ಬಗ್ಗೆ ನವರಸನಾಯಕ ಜಗ್ಗೇಶ್ ಕೆಲವು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
'ತೋತಾಪುರಿ 2' ಚಿತ್ರದ ಟ್ರೇಲರ್ ಮಿಲಿಯನ್ ಜನ ನೋಡಿ ಮೆಚ್ಚಿಕೊಂಡಿದ್ದಾರೆ. ಇದು ಸಿನಿಮಾಗೆ ಸಿಕ್ಕ ಮೊದಲ ಸಕ್ಸಸ್ ಎನ್ನುತ್ತಾ ಮಾತು ಪ್ರಾರಂಭಿಸಿದ ಜಗ್ಗೇಶ್, "ತೋತಾಪುರಿ ಮೊದಲ ಭಾಗವನ್ನು ನೋಡಿದ ಸಿನಿ ಪ್ರೇಮಿಗಳಿಗೆ ತೋತಾಪುರಿ 2ನಲ್ಲೂ ಅಷ್ಟೇ ಕಾಮಿಡಿ ಇದೆ. ಆದರೆ ಕೆಲ ಗಂಭೀರವಾದ ವಿಚಾರಗಳನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಧನಂಜಯ್ ಹಾಗು ಸುಮನ್ ರಂಗನಾಥ್ ನಟನೆ ಅದ್ಭುತವಾಗಿದೆ. ಎರಡು ಗಂಟೆಯ ಸಿನಿಮಾ ಸಂದೇಶದ ಜೊತೆಗೆ ಎಂಟರ್ಟೈನ್ಮೆಂಟ್ ಪಕ್ಕಾ. ಇನ್ನು ಮೇಕಿಂಗ್ ಕೂಡ ಬಹಳ ಅದ್ದೂರಿಯಾಗಿ ಮೂಡಿಬಂದಿದೆ" ಎಂದರು.
"ತೋತಾಪುರಿ ಮೊದಲ ಭಾಗದಲ್ಲಿ ಎಲ್ಲರ ಪಾತ್ರ ಪರಿಚಯ ಆಗಿತ್ತು. ತೋತಾಪುರಿ 2ನಲ್ಲಿ ನೀವು ನಗುವುದು ಮಾತ್ರವಲ್ಲ, ಸಿನಿಮಾ ನೋಡಿ ಅಳುತ್ತೀರಿ. ಈ ಚಿತ್ರಕಥೆ ಬಂದಾಗ ಯಾಕೆ ಎರಡು ಭಾಗಗಳಾಗಿ ಮಾಡಬೇಕು, ಒಂದೇ ಭಾಗದಲ್ಲಿ ತೋರಿಸಬಹುದು ಅಲ್ವಾ? ಅಂತಾ ನಿರ್ದೇಶಕರಿಗೆ ಕೇಳಿದ್ದೆ. ಆಗ ಅವರು, ಒಂದು ಗಂಭೀರ ವಿಚಾರವನ್ನು ಹೇಳುವುದಕ್ಕೆ ಸ್ವಲ್ಪ ಸಮಯ ಬೇಕು ಎಂದಿದ್ದರು. ಹೀಗಾಗಿ 'ತೋತಾಪುರಿ 2' ಮಾಡಿರೋದು. ಈ ಚಿತ್ರದಲ್ಲಿ ಬರುವ ಪ್ರತಿಯೊಂದು ಪಾತ್ರಗಳು ನೋಡುಗರಿಗೆ ಇಷ್ಟ ಆಗುತ್ತೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.