ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಜೊತೆ ಕನ್ನಡ ಸಿನಿಮಾವೊಂದು ಪೈಪೋಟಿ ನೀಡಲಿದೆ. ನವರಸನಾಯಕ ಜಗ್ಗೇಶ್ ಹಾಗೂ ಡಾಲಿ ಧನಂಜಯ್ ಅಭಿನಯದ 'ತೋತಾಪುರಿ 2' ಚಿತ್ರ ಆಗಸ್ಟ್ 11 ರಂದು ತೆರೆ ಕಾಣಲು ಸಜ್ಜಾಗಿದೆ. 'ಜೈಲರ್' ಚಿತ್ರವು ಆಗಸ್ಟ್ 10 ರಂದು ಬಿಡುಗಡೆಯಾಗುತ್ತಿದ್ದು, ಮರುದಿನವೇ 'ತೋತಾಪುರಿ 2' ಸಿನಿಮಾ ಕೂಡ ತೆರೆಗೆ ಅಪ್ಪಳಿಸಲಿದೆ. ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಸುರೇಶ್, "ನಾವು ಆಗಸ್ಟ್ 2ನೇ ವಾರ ಸಿನಿಮಾ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿರುವುದು ನಿಜ" ಎಂದಿದ್ದಾರೆ.
'ಜೈಲರ್' ಸಿನಿಮಾದಲ್ಲಿ ರಜನಿಕಾಂತ್ ಜೊತೆ ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಕೂಡ ನಟಿಸಿದ್ದಾರೆ. ಹೀಗಾಗಿ ಈ ಚಿತ್ರದ ಮೇಲೆ ಕನ್ನಡಿಗರಿಗೂ ಮುಗಿಲೆತ್ತರದ ನಿರೀಕ್ಷೆಯಿದೆ. ಈ ಕಾರಣದಿಂದಲೇ ಆಗಸ್ಟ್ 2ನೇ ವಾರ ಯಾವುದೇ ಕನ್ನಡ ಸಿನಿಮಾ ಘೋಷಣೆಯಾಗಿರಲಿಲ್ಲ. ಆದರೆ ಇದೀಗ ಜಗ್ಗೇಶ್ ನಟನೆಯ 'ತೋತಾಪುರಿ 2' ಸಿನಿಮಾ 'ಜೈಲರ್'ನೊಂದಿಗೆ ತೆರೆಗೆ ಬರಲು ಸಜ್ಜಾಗಿದೆ. ಈ ಮೊದಲೇ ಜಗ್ಗೇಶ್ ಸಿನಿಮಾ ಆಗಸ್ಟ್ ತಿಂಗಳಲ್ಲೇ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಇದೀಗ ಆಗಸ್ಟ್ 11 ರಂದು ಸಿನಿಮಾ ಬಿಡುಗಡೆಗೆ ಮುಹೂರ್ತ ನೀಡಲಾಗಿದೆ.
ಇಡೀ ಜಗತ್ತೇ ಒಂದು ಮನೆ, ನಾವೆಲ್ಲಾ ಒಂದೇ ಸೂರಿನಡಿ ಬದುಕುತ್ತಿರುವವರು ಎಂಬ ಭಾವೈಕ್ಯತೆಯ ಸಂದೇಶ ಸಾರುವ, ಸ್ಟ್ರಾಂಗ್ ಕಂಟೆಂಟ್ ಒಳಗೊಂಡಿದ್ದ ತೋತಾಪುರಿ ಸಿನಿಮಾ ಪ್ರೇಕ್ಷಕರಿಂದ, ವಿಮರ್ಶಕರಿಂದ ಮೆಚ್ಚುಗೆ ಪಡೆದು ಯಶಸ್ವಿಯಾಗಿತ್ತು. ಆಗಲೇ ತೋತಾಪುರಿ ಚಿತ್ರದ ಎರಡನೇ ಭಾಗವನ್ನು ನಿರ್ಮಾಣ ಮಾಡುತ್ತಿರುವುದಾಗಿ ನಿರ್ದೇಶಕ ವಿಜಯಪ್ರಸಾದ್ ಸೂಚನೆ ನೀಡಿದ್ದರು. ಅದರಂತೆ ಇದೀಗ ತೋತಾಪುರಿ ಭಾಗ 2 ಸಿನಿಮಾ ನಿರ್ಮಾಣ ಆಗಿದ್ದು, ಜಗ್ಗೇಶ್ ಜೊತೆ ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.