ಕರ್ನಾಟಕ

karnataka

By

Published : Jun 14, 2023, 5:46 PM IST

ETV Bharat / entertainment

Actor Jaggesh: ಮೂರು ಕನ್ನಡ ಪ್ಯಾನ್​ ಇಂಡಿಯಾ ಸಿನಿಮಾಗಳ ಬಗ್ಗೆ ಜಗ್ಗೇಶ್​ ನುಡಿದಿದ್ದ ಭವಿಷ್ಯ ನಿಜವಾಯ್ತಾ?

ಪ್ಯಾನ್ ಇಂಡಿಯಾ ಸಿನಿಮಾ ಸಂಸ್ಕೃತಿ ಬಗ್ಗೆ ನಟ ಜಗ್ಗೇಶ್​ ಭವಿಷ್ಯ ನುಡಿದಿದ್ದರು. ಅದೇನು ಗೊತ್ತಾ?

Jaggesh
ಜಗ್ಗೇಶ್​

ಮೂರು ವರ್ಷಗಳ ಹಿಂದೆ ನವರಸನಾಯಕ ಜಗ್ಗೇಶ್ ತಮ್ಮ 40 ವರ್ಷಗಳ ಅನುಭವದ ಆಧಾರದ ಮೇಲೆ ಪ್ಯಾನ್ ಇಂಡಿಯಾ ಸಿನಿಮಾ ಸಂಸ್ಕೃತಿ ಬಗ್ಗೆ ಭವಿಷ್ಯವೊಂದನ್ನು ನುಡಿದಿದ್ದರು. ಈ ಪ್ಯಾನ್ ಇಂಡಿಯಾ ಸಿನಿಮಾಗಳು ನಮ್ಮ ಹೊಟ್ಟೆ ತುಂಬಿಸಲ್ಲ ಎಂದಿದ್ದರು. ಡಬ್ಬಿಂಗ್, ಪ್ಯಾನ್ ಇಂಡಿಯಾ ಎಂದು ಎಲ್ಲರೂ ಟೋಕನ್ ಹಾಕ್ತವ್ರೆ ಎಂದು ಹೇಳಿದ್ದರು. ಆದರೆ, ಜಗ್ಗೇಶ್ ಆಡಿದ್ದ ಇದೇ ಮಾತು ಆಗ ಅನೇಕರನ್ನು ಕೆರಳಿಸಿತ್ತು.

ಕನ್ನಡ ಚಿತ್ರರಂಗವನ್ನು ಇಡೀ ದೇಶವೇ ಕೊಂಡಾಡ್ತಿರುವ ಸಮಯದಲ್ಲಿ ಕನ್ನಡದ್ದೇ ಹಿರಿಯ ನಟನೊಬ್ಬನ ಬಾಯಿಂದ ಇಂತ ಮಾತು ಬರಬಾರದಿತ್ತು ಎನ್ನುವ ಮಾತುಗಳು ಕೇಳಿಬಂದಿದ್ದವು. ಆ ನಂತರ ಜಗ್ಗೇಶ್, ಮುಂದಿನ ಪೀಳಿಗೆಯ ಉದ್ಧಾರಕ್ಕೆ ಸತ್ಯ ನುಡಿದೆ. ಅನುಭವಿಸಿ, ಕನ್ನಡಕ್ಕೆ ಚಟ್ಟ ತಯಾರು ಎಂಬ ಎಚ್ಚರಿಕೆಯನ್ನು ನೀಡಿ ಸುಮ್ಮನಾಗಿದ್ದರು. ಅವತ್ತು ಜಗ್ಗೇಶ್ ಕೊಟ್ಟಿದ್ದ ಎಚ್ಚರಿಕೆ ಇಂದು ಬಹುತೇಕ ನಿಜವಾದಂತೆ ಕಾಣುತ್ತಿದೆ.

ಪ್ಯಾನ್ ಇಂಡಿಯಾ ಪರ್ಯಟನೆ ಮಾಡುವ ಉಮೇದಿಗೆ ಬಿದ್ದ ಕನ್ನಡ ಚಿತ್ರರಂಗದಲ್ಲಿ ಈಗ ಹಾಹಾಕಾರದ ಕೂಗು ಕೇಳಿ ಬರ್ತಿದೆ. ಒಂದು ಕಡೆ ಪ್ರತಿ ವಾರ ಸಿನಿಮಾಗಳು ಜಿದ್ದಿಗೆ ಬಿದ್ದಂತೆ ಬಿಡುಗಡೆಯಾಗುತ್ತಿವೆ. ಇನ್ನೊಂದು ಕಡೆ ಚಿತ್ರಮಂದಿರಗಳಿಗೆ ಬೀಗ ಬೀಳುತ್ತಿದೆ. ಒಂದು ಕಾಲದಲ್ಲಿ ಕನ್ನಡದ ಸೂಪರ್​ಸ್ಟಾರ್​ ಎನಿಸಿಕೊಂಡ ನಟರ ಸಿನಿಮಾಗಳು ನಿರಂತರವಾಗಿ ಬಿಡುಗಡೆಯಾಗುತ್ತಲೇ ಇದ್ದವು.

ಶಿವ ರಾಜ್​ಕುಮಾರ್, ಪುನೀತ್ ರಾಜ್​ಕುಮಾರ್​, ಉಪೇಂದ್ರ, ದುನಿಯಾ ವಿಜಯ್ ಚಿತ್ರಗಳು ಬರುತ್ತಲೇ ಇದ್ದವು. ಗಣೇಶ್ ಅಭಿನಯದ ಚಿತ್ರಗಳು ವರ್ಷಕ್ಕೆ ಎರಡು, ಮೂರು ಬಿಡುಗಡೆ ಆಗ್ತಿದ್ದವು. ಇನ್ನು ಯಶ್ ಅಭಿನಯದ ಒಂದು ಸಿನಿಮಾ ಆದರೂ ತೆರೆಗೆ ಬರ್ತಿತ್ತು. ಸುದೀಪ್ ಕೂಡ ವರ್ಷಕ್ಕೆ ಎರಡು ಮೂರು ಸಿನಿಮಾಗಳನ್ನು ಮಾಡ್ತಿದ್ರು. ನಮ್ಮೆಲ್ಲರನ್ನ ಅಗಲುವ ಮುಂಚೆ ಅಪ್ಪು ಕೂಡ ತಮ್ಮ ಸ್ಪೀಡ್​ನ್ನು ಹೆಚ್ಚಿಸಿಕೊಂಡಿದ್ದರು. ಕೊರೊನಾ ಎಫೆಕ್ಟ್​ ಚಿತ್ರರಂಗಕ್ಕೂ ಬಾಧಿಸಿದ ನಂತರ ವರ್ಷಕ್ಕೆ ಒಂದೇ ಸಿನಿಮಾ ಎಂಬ ನಿಯಮವನ್ನು ಮುರಿದಿದ್ದ ಅಪ್ಪು ಒಂದೂವರೆ ವರ್ಷದಲ್ಲಿ ನಾಲ್ಕೈದು ಸಿನಿಮಾ ಮಾಡುವ ಗುರಿಯನ್ನ ಇಟ್ಟುಕೊಂಡಿದ್ದರು. ಆದರೆ ಅಪ್ಪು ಅಗಲಿಕೆಯಿಂದ ಚಿತ್ರರಂಗಕ್ಕೆ ದೊಡ್ಡ ಮಟ್ಟದ ನಷ್ಟ ಆಗಿರೋದಂತು ಸತ್ಯ.

ಇನ್ನು, ಶಿವಣ್ಣ ಅಭಿನಯದ ಕನಿಷ್ಠ ನಾಲ್ಕು ಸಿನಿಮಾಗಳು ವರ್ಷಕ್ಕೆ ಬಿಡುಗಡೆಯಾಗುವ ಸಂಪ್ರದಾಯ ಇತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಅಪ್ಪು ನಮ್ಮ ನಡುವೆ ಇಲ್ಲ. ಯಶ್ ಕೆಜಿಎಫ್ 2 ಬಂದು ಹೋಗಿ ಒಂದು ವರ್ಷವಾದರೂ ಹೊಸ ಸಿನಿಮಾದ ಘೋಷಣೆ ಮಾಡ್ತಿಲ್ಲ. ಸುದೀಪ್ ಅಭಿನಯದ ಸಿನಿಮಾ ಬಂದು ಒಂದು ವರ್ಷವಾಗಿದೆ. ಶಿವರಾಜಕುಮಾರ್​ ಅಭಿನಯದ ಯಾವ ಸಿನಿಮಾ ಕೂಡ ಈ 6 ತಿಂಗಳಿನಲ್ಲಿ ಬಿಡುಗಡೆಯಾಗಿಲ್ಲ. ರಕ್ಷಿತ್ ಶೆಟ್ಟಿ 777 ಚಾರ್ಲಿ ನಂತರ ಬೆಳ್ಳಿ ತೆರೆಗೆ ಇನ್ನೂ ಮರಳಿಲ್ಲ.

ರಿಷಬ್ ಶೆಟ್ಟಿ ಕಾಂತಾರ ಬಿಟ್ಟು ಬೇರೆ ಆಲೋಚನೆಯನ್ನು ಸದ್ಯಕ್ಕೆ ಮಾಡ್ತಿಲ್ಲ. ಎರಡು ವರ್ಷಗಳಿಂದ ಧ್ರುವ ಸರ್ಜಾ ಅಭಿನಯದ ಒಂದು ಸಿನಿಮಾ ಕೂಡ ಬಿಡುಗಡೆಯಾಗಿಲ್ಲ. ದುನಿಯಾ ವಿಜಯ್ ಕೂಡ ಒಂದೂವರೆ ವರ್ಷದಿಂದ ಚಿತ್ರಮಂದಿರದ ಕಡೆ ಸುಳಿದಿಲ್ಲ. ಬಾನ ದಾರಿಯಲ್ಲಿ ಸಿನಿಮಾ ಬಿಡುಗಡೆಗೆ ಸಿದ್ಧವಿದ್ದರೂ ಬಿಡುಗಡೆ ಮಾಡುವ ಮನಸ್ಸು ಗೋಲ್ಡನ್ ಸ್ಟಾರ್ ಗಣೇಶ್​ಗೆ ಸದ್ಯಕ್ಕೆ ಇದ್ದಂತಿಲ್ಲ.

ಗಣೇಶ್, ವಿಜಯ್, ಶಿವಣ್ಣ ಇವರನ್ನ ಹೊರತುಪಡಿಸಿದರೆ, ಮಿಕ್ಕ ಎಲ್ಲರಿಗೂ ಇಲ್ಲಿ ದೊಡ್ಡ ಸಿನಿಮಾ ಮಾಡಬೇಕೆಂಬ ಹಂಬಲ. ಮಾಡಿದರೆ ಪ್ಯಾನ್ ಇಂಡಿಯಾ ಸಿನಿಮಾನೇ ಮಾಡಬೇಕೆಂಬ ಛಲ. ಹೀಗಾಗಿ ಆರಂಭದಲ್ಲಿ ಕನ್ನಡ ಚಿತ್ರರಂಗಕ್ಕೆ ಚಿನ್ನದ ಮೊಟ್ಟೆಯಂತೆ ಕಂಡ ಪ್ಯಾನ್ ಇಂಡಿಯಾ ಎಂಬ ಪದ ಇದೀಗ ಕಿರಿಕಿರಿಗೆ ಕಾರಣವಾಗಿದೆ. ಕೆಜಿಎಫ್, ಕಾಂತಾರ, ವಿಕ್ರಾಂತ್ ರೋಣ, 777 ಚಾರ್ಲಿ ಚಿತ್ರಗಳಿಂದ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಿಕೊಂಡ ಕನ್ನಡ ಚಿತ್ರರಂಗ ಆದಾಯ ಇಲ್ಲದೆ ಈಗ ಹೈರಾಣಾಗ್ತಿದೆ.

ಸ್ಯಾಟ್ ಲೈಟ್ ರೈಟ್ಸ್, ಡಿಜಿಟಲ್ ರೈಟ್ಸ್, ಆಡಿಯೋ ರೈಟ್ಸ್ ಮಾರಾಟ ಮಾಡಲಾಗದೇ ನಿರ್ಮಾಪಕರು ಒದ್ದಾಡುವಂತಹ ಸ್ಥಿತಿಯೂ ನಿರ್ಮಾಣವಾಗಿದೆ. ಕೆಲವು ದಿನಗಳ ಹಿಂದೆ ಮಾತನಾಡಿದ್ದ ನಿರ್ಮಾಪಕ ಹಾಗೂ ವಿತರಕ ಜಾಕ್ ಮಂಜು, ಹೀಗೆ ಆದ್ರೆ ಕನ್ನಡ ಚಿತ್ರರಂಗಕ್ಕೆ ಬೀಗ ಹಾಕಿ ಎಲ್ಲರೂ ಮನೆಗೆ ಹೋಗಬೇಕಾಗುತ್ತೆ ಎಂದಿದ್ದಾರೆ. ಅರ್ಧ ವರ್ಷ ಕಳೆದರೂ ಒಂದು ಸಿನಿಮಾ ಬಂದಿಲ್ಲ, ಗೆದ್ದಿಲ್ಲ. ಒಂದು ವೇಳೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳ ಬಾಗಿಲು ಮುಚ್ಚಿದರೆ ಯಾವ ಹೀರೋಗೂ ಇಲ್ಲಿ ಕೆಲಸ ಇರಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದರು.

ಒಟ್ಟಿನಲ್ಲಿ ಕಾಲ ಮಿಂಚಿ ಮರೆಯಾಗುವ ಮುನ್ನ, ಪ್ಯಾನ್ ಇಂಡಿಯಾ ಗುಂಗಿನಿಂದ ನಮ್ಮಲ್ಲಿನ ಸೂಪರ್ ಸ್ಟಾರ್​ಗಳು ಹೊರಬರಬೇಕಿದೆ. ಮಾಡಿದರೆ ಕೇವಲ ಪ್ಯಾನ್ ಇಂಡಿಯಾ ಸಿನಿಮಾ ಮಾತ್ರ ಇಲ್ಲದೆ ಇದ್ದರೆ ಇಲ್ಲ ಎಂದು ತಮಗೆ ಹಾಕಿಕೊಂಡಿರುವ ನಿಬಂಧನೆಯನ್ನು ಮುರಿಯಬೇಕಿದೆ.

ಇದನ್ನೂ ಓದಿ:ತಮಟೆ ಬಾರಿಸಿಕೊಂಡು 'ಗರಡಿ' ಪ್ರಚಾರ ಮಾಡಿದರು ಯೋಗರಾಜ್​ ಭಟ್ರು..

ABOUT THE AUTHOR

...view details