ಮಾರ್ಚ್ 17 ರಾಜ್ಯಸಭಾ ಸದಸ್ಯರಾದ ಜಗ್ಗೇಶ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ನಟ ಜಗ್ಗೇಶ್ ಅವರು ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುಟುಂಬ ಸಮೇತ ಭೇಟಿಯಾದರು. ಜಗ್ಗೇಶ್ ಅವರಿಗೆ ದೇವರು ಆರೋಗ್ಯ, ಆಯಸ್ಸು ನೀಡಲಿ ಎಂದು ಪ್ರಧಾನ ಮಂತ್ರಿ ಮೋದಿ ಆಶೀರ್ವದಿಸಿದರು. ಜಗ್ಗೇಶ್ ಅವರ ಜೊತೆಗೆ ಪತ್ನಿ ಪರಿಮಳಾ ಜಗ್ಗೇಶ್ ಹಾಗೂ ಪುತ್ರ ಯತಿರಾಜ್ ಕೂಡ ಇದ್ದರು.
ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಜಗ್ಗೇಶ್ ಕುಟುಂಬ ಪರಿಮಳಾ ಜಗ್ಗೇಶ್ ಕಾರ್ಯಕ್ಕೆ ಮೆಚ್ಚುಗೆ:ಪರಿಮಳಾ ಜಗ್ಗೇಶ್ ಅವರು ಸಿರಿಧಾನ್ಯಗಳನ್ನು ಬಳಸಿ ಮಧುಮೇಹ ಹತೋಟಿಗೆ ತರುವುದರ ಕುರಿತು ವಿಶೇಷ ಅಧ್ಯಯನ ಮಾಡಿದ್ದಾರೆ. ಇದರ ಉಪಯೋಗವನ್ನು ಸಾಕಷ್ಟು ಜನರು ಪಡೆದುಕೊಳ್ಳುತ್ತಿದ್ದಾರೆ. ಈ ವಿಷಯವನ್ನು ತಿಳಿದ ಪ್ರಧಾನಿಗಳು ಬಹಳ ಖುಷಿಪಟ್ಟರು. ಮಧುಮೇಹಕ್ಕೆ ಸಂಬಂಧಿಸಿದ ಹಾಗೆ ಸರ್ಕಾರದಿಂದ ನಡೆಯುತ್ತಿರುವ ಕಾರ್ಯಗಳಲ್ಲಿ ಪರಿಮಳಾ ಜಗ್ಗೇಶ್ ಅವರು ಪಾಲ್ಗೊಳ್ಳಲು ಸೂಚಿಸಿದರು.
ಪ್ರಧಾನಿಯೊಂದಿಗೆ ಜಗ್ಗೇಶ್ ಪುತ್ರ ಯತಿರಾಜ್ ಅಲ್ಲಿಂದಲೇ ಕೇಂದ್ರ ಸಚಿವರಿಗೂ ಈ ವಿಷಯವನ್ನು ತಿಳಿಸಿದರು. ಜಗ್ಗೇಶ್ ಅವರ ಕಿರಿಯ ಪುತ್ರ ಯತಿರಾಜ್ ಅವರನ್ನೂ ಕೂಡ ಪ್ರಧಾನ ಮಂತ್ರಿಗಳು ವಿಶೇಷವಾಗಿ ಮಾತನಾಡಿಸಿದರು. ನನಗೆ ಮಾರ್ಚ್ 17ಕ್ಕೆ 60 ವರ್ಷ ತುಂಬಲಿದೆ. ಇಂತಹ ಸಂದರ್ಭದಲ್ಲಿ ರಾಷ್ಟ್ರನಾಯಕ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಅವರ ಆಶೀರ್ವಾದ ಪಡೆದುಕೊಂಡಿದ್ದು, ತುಂಬಾ ಸಂತೋಷವಾಗಿದೆ. ಇದು ನನ್ನ ಬಾಳಿನಲ್ಲೇ ಮರೆಯಲಾಗದ ದಿನ ಎಂದು ಜಗ್ಗೇಶ್ ತಿಳಿಸಿದ್ದಾರೆ.
ಜಗ್ಗೇಶ್ ಟ್ವೀಟ್:ಜನ್ಮದಿನಕ್ಕೂ ಮೊದಲೇ ನಿಮ್ಮ ಆಶೀರ್ವಾದ ಪಡೆಯಲು ಅವಕಾಶ ಕೊಟ್ಟ ಪಿಎಂ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನನ್ನ ಬದುಕಿನ ಶ್ರೇಷ್ಠ ದಿನ ಇದು. ಮಾರ್ಚ್ 17 ನನ್ನ ಹುಟ್ಟುಹಬ್ಬ. ಈ ವರ್ಷ ನನಗೆ 60ನೇ ವಸಂತ. ನನ್ನ ಮೆಚ್ಚಿನ ಪ್ರಧಾನಿಗಳು ನನಗೆ ಹಾಗೂ ಹೆಂಡತಿ ಮಗನಿಗೆ ಮನತುಂಬಿ ಹರಸಿದರು. ಅವರಿಗೆ ನನ್ನ ಗುರುಗಳಾದ ರಾಯರ ವಿಗ್ರಹ ಸಮರ್ಪಿಸಿದೆ ಎಂದು ನವರಸನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಜಗ್ಗೇಶ್ ಕುಟುಂಬ
ಇದನ್ನೂ ಓದಿ:''ನಾವು ಗೆದ್ದೆವು'' - ಭಾರತದ ಆಸ್ಕರ್ ಸಾಧನೆಯನ್ನು ಕೊಂಡಾಡಿದ ನಟ ಅಮಿತಾಭ್ ಬಚ್ಚನ್
ಕನ್ನಡ ಚಿತ್ರರಂಗದಲ್ಲಿ 4 ದಶಕಗಳನ್ನು ಪೂರೈಸಿರುವ ಜಗ್ಗೇಶ್ ನವರಸನಾಯಕ ಎಂದೇ ಹೆಸರುವಾಸಿ. 1982ರಲ್ಲಿ ಇಬ್ಬನಿ ಕರಗಿತು, ಶ್ವೇತ ಗುಲಾಬಿ ಎಂಬ ಸಿನಿಮಾಗಳ ಮೂಲಕ ಕನ್ನಡ ಸಿನಿ ಜಗತ್ತಿಗೆ ಎಂಟ್ರಿ ಕೊಟ್ಟ ಜಗ್ಗೇಶ್ ಬಳಿಕ ಹಲವು ಚಿತ್ರಗಳನ್ನು ಮನೋರಂಜನಾ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಸಣ್ಣ ಪುಟ್ಟ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದ ಜಗ್ಗೇಶ್ 1991ರಲ್ಲಿ 'ಭಂಡ ನನ್ನ ಗಂಡ' ಚಿತ್ರದ ಮೂಲಕ ಜಗ್ಗೇಶ್ ನಾಯಕ ನಟನಾಗಿ ಬಡ್ತಿ ಪಡೆದರು. ಕಾಮಿಡಿ ಹೀರೋ ಆಗಿ ನಟಿಸಿ ಕನ್ನಡಿಗರನ್ನು ಮನೋರಂಜಿಸಿರುವ ಇವರು ಸುಮಾರು 140ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ರಾಜ್ಯಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಜಗ್ಗೇಶ್ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಹ್ಯಾಪಿ ಬರ್ತ್ಡೇ ಅಶ್ವಿನಿ ಪುನೀತ್ ರಾಜ್ಕುಮಾರ್: ಅಪ್ಪು ಜನ್ಮದಿನದಂದು ಒಟಿಟಿಗೆ ಗಂಧದಗುಡಿ ಎಂಟ್ರಿ