ನವದೆಹಲಿ:ಅಕ್ರಮ ಹಣ ವರ್ಗಾವಣೆ ಪ್ರಕರಣದ ಎದುರಿಸುತ್ತಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ಗೆ ಇಂದು (ಸೋಮವಾರ) ಮಧ್ಯಂತರ ನಿರೀಕ್ಷಣಾ ಜಾಮೀನು ಸಿಕ್ಕಿದೆ. ತಮಗೆ ಜಾಮೀನು ನೀಡುವಂತೆ ನಟಿಯು ಇಂದು ತಮ್ಮ ವಕೀಲರೊಂದಿಗೆ ದೆಹಲಿಯ ಪಟಿಯಾಲ ಕೋರ್ಟ್ ಮೆಟ್ಟಿಲೇರಿದ್ದರು.
ಇವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೈಲೇಂದರ್ ಮಲಿಕ್ ಅವರು 50,000 ರೂಪಾಯಿಗಳ ಭದ್ರತಾ ಬಾಂಡ್ ಜೊತೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ. ಈ ಮೂಲಕ ಬಂಧನದ ಭೀತಿ ಎದುರಿಸುತ್ತಿದ್ದ ಜಾಕ್ವೆಲಿನ್ ಕೊಂಚ ನಿರಾಳರಾಗಿದ್ದಾರೆ.
ಸುಕೇಶ್ ಚಂದ್ರಶೇಖರ್ ಮತ್ತು ಇತರರು ಒಳಗೊಂಡಿರುವ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ವಿಕ್ರಾಂತ್ ರೋಣ ಚಿತ್ರದ ರಾ ರಾ ರಕ್ಕಮ್ಮ, ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.
ವಂಚಕ ಸುಕೇಶ್‌ನಿಂದ ದುಬಾರಿ ಬೆಲೆಯುಳ್ಳ ಉಡುಗೊರೆಗಳನ್ನು ಸ್ವೀಕರಿಸಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿತ್ತು. ಹಾಗಾಗಿ ತನಿಖೆ ತೀವ್ರಗೊಳಿಸಿದ್ದ ಜಾರಿ ನಿರ್ದೇಶನಾಲಯ ಈ ವರ್ಷ ಆಗಸ್ಟ್ 17 ರಂದು ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ಹೆಸರನ್ನು ಉಲ್ಲೇಖಿಸಿ ದೆಹಲಿ ನ್ಯಾಯಾಲಯಕ್ಕೆ ಪೂರಕ ಆರೋಪ ಪಟ್ಟಿಯಲ್ಲಿ ಸಲ್ಲಿಸಿತ್ತು.
ಇದಕ್ಕೂ ಮುನ್ನ ತನಿಖೆಗೆ ಹಾಜರಾಗುವಂತೆ ನಟಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿತ್ತು. ಹಲವು ಬಾರಿ ಕೆಲವು ಕಾರಣಗಳನ್ನು ನೀಡಿ ಜಾಕ್ವೆಲಿನ್ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರವೀಣ್ ಸಿಂಗ್ ಬುಧವಾರ ಪೂರಕ ಆರೋಪ ಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಸೆಪ್ಟೆಂಬರ್ 26, 2022(ಇಂದು) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಪ್ರಸ್ತುತ ಪ್ರಕರಣದ ಎಲ್ಲ ಆರೋಪಿಗಳಿಗೆ ದೋಷಾರೋಪ ಪಟ್ಟಿಯ ಪ್ರತಿಯನ್ನು ನೀಡುವಂತೆಯೂ ನ್ಯಾಯಾಲಯವು ಇಡಿಗೆ ಸೂಚಿಸಿತ್ತು.