ಸುಕೇಶ್ ಚಂದ್ರಶೇಖರ್ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇಂದು ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರಾಗಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಜಾಕ್ವೆಲಿನ್ ನ್ಯಾಯಾಲಯ ತಲುಪಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಆರೋಪಿ ಸುಖೇಶ್ ಚಂದ್ರಶೇಖರ್ ಮತ್ತು ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ದೂರು ದಾಖಲಿಸಿದೆ. ಸುಖೇಶ್ ಈಗಾಗಲೇ ಜೈಲುಪಾಲಾಗಿದ್ದಾನೆ. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 18ರಂದು ಪಟಿಯಾಲ ಹೌಸ್ ಕೋರ್ಟ್‌ನಲ್ಲಿ ನಡೆಯಲಿದೆ. ಫೆಬ್ರವರಿಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚಕ ಸುಖೇಶ್ ಚಂದ್ರಶೇಖರ್ ಕೂಡ ಪಟಿಯಾಲಾ ಹೌಸ್ ಕೋರ್ಟ್‌ಗೆ ಹಾಜರಾಗಿದ್ದ.
ಸುಕೇಶ್ ಚಂದ್ರಶೇಖರ್ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ಈ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಸುಕೇಶ್ಗೆ ಸಂಬಂಧಿಸಿದ ಈ ಪ್ರಕರಣವನ್ನು ಇಡಿ, ದೆಹಲಿ ಪೊಲೀಸರು ಮತ್ತು ಆರ್ಥಿಕ ಅಪರಾಧ ವಿಭಾಗ ತನಿಖೆ ನಡೆಸುತ್ತಿದ್ದು, ಆತ ಇತರ ಹಲವು ಪ್ರಕರಣಗಳಲ್ಲಿ ಸಹ ಆರೋಪಿಯಾಗಿದ್ದಾನೆ. ಪ್ರಕರಣದ ತನಿಖೆ ವೇಳೆ ಹಲವು ಬಾಲಿವುಡ್ ನಟಿಯರ ಹೆಸರುಗಳು ಬಯಲಿಗೆ ಬಂದಿವೆ. ಇವರಲ್ಲಿ ಮುಖ್ಯವಾಗಿ ನಟಿ ನೋರಾ ಫತೇಹಿ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಸಹ ಸೇರಿದ್ದಾರೆ. ಆದರೆ, ಜಾಕ್ವೆಲಿನ್ ನಿರಪರಾಧಿ ಎಂದು ಸುಕೇಶ್ ಈಗಾಗಲೇ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ. ಅವರು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಸುಕೇಶ್ ನ್ಯಾಯಾಲಯಕ್ಕೆ ತಿಳಿಸಿದ್ದಾನೆ.
2021ರಲ್ಲಿ ದಾಖಲಾದ ಈ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನೋರಾ ಫತೇಹಿ ಸೇರಿದಂತೆ ಹಲವಾರು ಬಾಲಿವುಡ್ ನಟಿಯರು ಮತ್ತು ಮಾಡೆಲ್‌ಗಳನ್ನು ಚಂದ್ರಶೇಖರ್ ಅವರೊಂದಿಗಿನ ಸಂಬಂಧದ ಬಗ್ಗೆ ಇಡಿ ಈಗಾಗಲೇ ತನಿಖೆಗಳಲ್ಲಿ ಪ್ರಶ್ನಿಸಿದೆ. ತನಿಖೆಗೆ ಸಂಬಂಧಿಸಿದಂತೆ ಜಾಕ್ವೆಲಿನ್ ಅವರಿಗೆ ಇಡಿ ಹಲವು ಬಾರಿ ಸಮನ್ಸ್ ನೀಡಿತ್ತು. ನಂತರ ಜನವರಿಯಲ್ಲಿ ಇಡಿ ಸಲ್ಲಿಸಿದ ಪೂರಕ ಚಾರ್ಜ್ ಶೀಟ್‌ನಲ್ಲಿ ಜಾಕ್ವೆಲಿನ್ ಅವರನ್ನು ಆರೋಪಿ ಎಂದು ಹೆಸರಿಸಲಾಯಿತು.