ನವದೆಹಲಿ : ಸದ್ಯಕ್ಕೆ ದೇಶದಲ್ಲಿ ಹೊಸ ಚರ್ಚೆಯೊಂದು ಪ್ರಾರಂಭವಾಗಿದೆ. 'ಇಂಡಿಯಾ' ಬದಲಿಗೆ 'ಭಾರತ್' (Bharat) ಎಂಬ ಹೆಸರು ಅಧಿಕೃತವಾಗಿ ಬಳಕೆ ಮಾಡುವ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸೆ. 18 ರಿಂದ 22ರ ವರೆಗೆ ನಡೆಯುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ. ಈ ಕುರಿತಂತೆ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಬಳಿಕ ನಟ ಜಾಕಿ ಶ್ರಾಫ್ ಅವರು 'ಇಂಡಿಯಾ' ಬದಲಿಗೆ 'ಭಾರತ' ಹೆಸರು ಬಳಸಲು ಮುಂದಾದ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನಿನ್ನೆ ರಾಷ್ಟ್ರ ರಾಜಧಾನಿಯಲ್ಲಿ ನವದೆಹಲಿಯಲ್ಲಿ ನಡೆದ 'ಪ್ಲಾನೆಟ್ ಇಂಡಿಯಾ' ಅಭಿಯಾನ ಕಾರ್ಯಕ್ರಮದಲ್ಲಿ ಜಾಕಿ ಶ್ರಾಫ್ ಮತ್ತು ದಿಯಾ ಮಿರ್ಜಾ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಜಾಕಿ ಶ್ರಾಫ್, "ಮೊದಲು ನಮ್ಮ ದೇಶವನ್ನು ಭಾರತ (Bharat) ಎಂದು ಕರೆಯಲಾಗುತ್ತಿತ್ತು. ನನ್ನ ಹೆಸರು ಜಾಕಿ (Jackie), ಕೆಲವರು ನನ್ನನ್ನು (Jocky) ಜೋಕಿ ಎಂದು ಕರೆಯುತ್ತಾರೆ ಮತ್ತೆ ಕೆಲವರು(Jaki) ಜಕಿ ಎಂದು ಕರೆಯುತ್ತಾರೆ. ಜನರು ನನ್ನ ಹೆಸರನ್ನು ಬದಲಾಯಿಸುತ್ತಿರಬಹುದು, ಆದರೆ ನಾನು ಬದಲಾಗುವುದಿಲ್ಲ. ಕೇವಲ ಹೆಸರು ಮಾತ್ರ ಬದಲಾಗುತ್ತದೆ. ಹಾಗೆಯೇ, ನೀವುಗಳು ದೇಶದ ಹೆಸರು ಬದಲಾಯಿಸುತ್ತಲೇ ಇರುತ್ತೀರಿ. ಆದರೆ ನೀವು ಭಾರತೀಯರು ಎಂಬುದನ್ನು ಮರೆಯಬೇಡಿ" ಎಂದರು.
ಅಮಿತಾಬ್ ಬಚ್ಚನ್ ಟ್ವೀಟ್ :ಎಕ್ಸ್ ಆ್ಯಪ್ನಲ್ಲಿ ಪೋಸ್ಟ್ವೊಂದನ್ನು ಮಾಡಿರುವ ನಟ ಅಮಿತಾಬ್ ಬಚ್ಚನ್, ಹಿಂದಿಯಲ್ಲಿ "ಭಾರತ್ ಮಾತಾ ಕಿ ಜೈ" ಎಂದು ಬರೆದಿದ್ದಾರೆ. ಇಂಡಿಯಾ ಮತ್ತು ಭಾರತ ಹೆಸರಿಗೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಬಿಗ್ ಬಿ, ಈ ರೀತಿ ಟ್ವೀಟ್ ಮಾಡಿರುವುದರಿಂದ ದೇಶದ ಹೆಸರು ಬದಲಾವಣೆಯ ಪರವಾಗಿ ತಮ್ಮ ಬೆಂಬಲವನ್ನು ಪ್ರದರ್ಶಿಸಿದಂತಿದೆ.