ಹೈದರಾಬಾದ್: ಬಾಲಿವುಡ್ ನಟಿ ಜಾಹ್ನವಿ ಕಪೂರ್ ಸದ್ಯ ತಮ್ಮ ಹೊಸ ಚಿತ್ರ 'ಬವಾಲ್' ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಎಪಿಲೆಪ್ಟಿಕ್ (ಫಿಟ್ಸ್ ರೋಗ) ರೋಗಿಯಾಗಿ ಈ ಚಿತ್ರದಲ್ಲಿ ನಟಿ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಲಿವುಡ್ನಲ್ಲಿ ಈಗಾಗಲೇ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಕಾಣುತ್ತಿರುವ ನಟಿ ಇದೀಗ ದಕ್ಷಿಣ ಚಿತ್ರರಂಗದತ್ತ ತೆರಳಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಈ ಕುರಿತು ಸಂದರ್ಶನದಲ್ಲಿ ನಟಿ ಮಾತನಾಡಿದ್ದಾರೆ. ಈ ವೇಳೆ ದಕ್ಷಿಣದಲ್ಲಿ ತಮಗೆ ವ್ಯಕ್ತವಾಗುತ್ತಿರುವ ಪ್ರೀತಿ ಕುರಿತು ಮಾತನಾಡಿದ್ದಾರೆ.
ಬವಾಲ್ ಕುರಿತು: ಜಾಹ್ನವಿ ಕಪೂರ್ ಮತ್ತು ವರುಣ್ ಧವನ್ ಅಭಿನಯದ ಬಹು ನಿರೀಕ್ಷಿತ ರೊಮ್ಯಾಂಟಿಕ್ ಸಿನಿಮಾ 'ಬವಾಲ್'. ಚಿತ್ರಕ್ಕೆ ನಿತೀಶ್ ತಿವಾರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಎರಡನೇ ವಿಶ್ವಯುದ್ದ ಹಿನ್ನೆಲೆಯನ್ನಿಟ್ಟುಕೊಂಡು ಕಥೆ ರಚಿಸಲಾಗಿದೆ. ಇದೇ ಮೊದಲ ಬಾರಿಗೆ ಜಾಹ್ನವಿ ಮತ್ತು ವರುಣ್ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರ ಅತ್ಯಂತ ದುಬಾರಿ ಚಿತ್ರವಾಗಿದೆ. ಕಾರಣ ವಿಶ್ವ ಯುದ್ದದ ಕಥೆ ಹಿನ್ನೆಲೆ ಇದನ್ನು ಪ್ಯಾರಿಸ್, ಬರ್ಲಿನ್, ಪೋಲೆಂಡ್, ಆಮ್ಸ್ಟರ್‌ಡ್ಯಾಮ್, ಕ್ರಾಕೋವ್, ವಾರ್ಸಾ ಜೊತೆಗೆ ಲಖನೌ ಮತ್ತು ಭಾರತದ ಇತರ ಎರಡು ನಗರಗಳಲ್ಲಿ ಚಿತ್ರೀಕರಿಸಲಾಗಿದೆ.
ಬವಾಲ್ ಚಿತ್ರ ಯಶಸ್ಸಿನ ಕುರಿತು ನಿರ್ದೇಶಕ ನಿತೇಶ್ ತಿವಾರಿ, ನಟ ವರುಣ್ ಧವನ್ ಜೊತೆ ಸಂದರ್ಶನದಲ್ಲಿ ಮಾತನಾಡಿರುವ ಅವರು, ದಕ್ಷಿಣ ಚಿತ್ರರಂಗದಿಂದ ಹೆಚ್ಚಿನ ಪ್ರೀತಿ ಮತ್ತು ಮೆಚ್ಚುಗೆ ವ್ಯಕ್ತವಾಗುತ್ತಿರುವ ಕುರಿತು ಮಾತನಾಡಿದ್ದಾರೆ. ಇದೇ ಮೊದಲ ಬಾರಿಗೆ ದಕ್ಷಿಣದಲ್ಲಿ ನಟಿಸುತ್ತಿರುವುದಕ್ಕೆ ಹೇಗಿದೆ ಅನುಭವ ಎಂಬ ಪ್ರಶ್ನೆಗೆ ಮಾತನಾಡಿರುವ ಅವರು, ಈಗಾಗಲೇ ತಮ್ಮ ತಾಯಿ ಅಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇದೀಗ ನಾನು ಮತ್ತೆ ಅಲ್ಲಿಗೆ ಮರಳುತ್ತಿರುವುದು ಒಂದು ರೀತಿ ಮನೆಗೆ ಹಿಂದಿರುಗಿರುವ ಅನುಭವ ಆಗಿದೆ ಎಂದಿದ್ದಾರೆ.