ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರ ಮುದ್ದಾದ ಅಭಿಮಾನಿ, ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಪುತ್ರ ಜೂಮೆ ಜೋ ಪಠಾಣ್ ಹಾಡಿಗೆ ಹೆಜ್ಜೆ ಹಾಕಿದ್ದು, ಇದಕ್ಕೆ ಸ್ವತಃ ಎಸ್ಆರ್ಕೆ ಪ್ರತಿಕ್ರಿಯಿಸಿದ್ದಾರೆ.
ಇರ್ಫಾನ್ ಪಠಾಣ್ ತಮ್ಮ ಟ್ವಿಟ್ಟರ್ ಪೇಜ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಅಭಿನಯದ ಸೂಪರ್ ಹಿಟ್ ಜೂಮೆ ಜೋ ಪಠಾಣ್ ಹಾಡಿಗೆ ಇರ್ಫಾನ್ ಪಠಾಣ್ ಅವರ ಮಗು ಮೈ ಕುಣಿಸಿರುವ ವಿಡಿಯೋವಿದು. ಮಗು ಫೋನ್‌ನಲ್ಲಿ ಹಾಡು ಕೇಳುವುದರೊಂದಿಗೆ ಮತ್ತು ಅದಕ್ಕೆ ನೃತ್ಯ ಮಾಡುವ ಮೂಲಕ ಎಸ್ಆರ್ಕೆ ಅವರ ಹಾಡಿಗೆ ಸ್ಪಂದಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ನೆಟ್ಟಿಗರ ಮೆಚ್ಚುಗೆ ಸಂಪಾದಿಸಿದೆ.
ವಿಡಿಯೋ ಹಂಚಿಕೊಂಡಿರುವ ಇರ್ಫಾನ್ ಪಠಾಣ್, ''ಖಾನ್ ಸರ್, ನಿಮ್ಮ ಅಭಿಮಾನಿಗಳ ಪಟ್ಟಿಗೆ ಈ ಹೊಸ ಅಭಿಮಾನಿಯನ್ನೂ ಸೇರಿಸಿ'' ಎಂದು ಬರೆದುಕೊಂಡಿದ್ದಾರೆ. ಇರ್ಫಾನ್ ಪಠಾಣ್ ಈ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಸೆಕ್ಷನ್ ಅಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಶುರು ಮಾಡಿದ್ದಾರೆ. ಅವರ ಕಾಮೆಂಟ್ ಸೆಕ್ಷನ್ ಹಾರ್ಟ್ ಎಮೋಜಿಗಳಿಂದ ತುಂಬಿದೆ. ಅಸಲಿ ಪಠಾನ್ ಇಲ್ಲಿದ್ದಾನೆ, ಮಗು ಬಹಳ ಮುದ್ದಾಗಿದೆ, ದೇವರು ಅವನನ್ನು ಯಾವಾಗಲೂ ಆಶೀರ್ವದಿಸಲಿ, ಛೋಟಾ ಪಠಾಣ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಶಾರುಖ್ ಖಾನ್ ತಮ್ಮ ಟ್ವಿಟರ್ ಪೇಜ್ನಲ್ಲಿ ಈ ವಿಡಿಯೋ ಹಂಚಿಕೊಂಡು ಪ್ರತಿಕ್ರಿಯಿಸಿದ್ದಾರೆ. ''ನಿಮಗಿಂತ ಪ್ರತಿಭಾವಂತ, ಛೋಟಾ ಪಠಾಣ್'' ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಇರ್ಫಾನ್ ಪಠಾಣ್, ''ಪ್ರತಿ ತಂದೆಯಂದಿರೂ ಈ ಮಾತನ್ನು ಕೇಳಲಿಚ್ಛಿಸುತ್ತಾರೆ'' ಎಂದು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, "ಪ್ರಪಂಚದಾದ್ಯಂತ ಅನೇಕರು (ಪಠಾಣ್ ಅಥವಾ ಅಭಿಮಾನಿಗಳು) ಇದ್ದಾರೆ ಎಂದು ನಾನು ಭಾವಿಸುತ್ತೇನೆ, ನೀವು (ಶಾರುಖ್ ಖಾನ್) ಬೆಳಕು, ನಿಮ್ಮ ಪ್ರೀತಿಗೆ ಧನ್ಯವಾದಗಳು" ಎಂದು ಬರೆದಿದ್ದಾರೆ