ಹೊಸ ವರ್ಷಾರಂಭದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಗೆಳೆಯ ನೂಪುರ್ ಶಿಖರೆ ಜೊತೆ ಅವರು ದಾಂಪತ್ಯ ಜೀವನ ಶುರು ಮಾಡಿದ್ದಾರೆ. ಹೀಗಾಗಿ, ಕಳೆದ ಕೆಲವು ದಿನಗಳಿಂದ ಅಮೀರ್ ಕುಟುಂಬದಲ್ಲಿ ಸಂಭ್ರಮದ ವಾತಾವರಣ ನೆಲೆಸಿದೆ. ಇದೀಗ ಆರತಕ್ಷತೆ ಕಾರ್ಯಕ್ರಮವೂ ನಡೆದಿದ್ದು, ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಶನಿವಾರ ಸಂಜೆ ಮುಂಬೈನಲ್ಲಿ ನಡೆದ ಆರತಕ್ಷತೆಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು. ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನಲ್ಲಿ (ಎನ್‌ಎಂಎಸಿಸಿ) ನಡೆದ ಅದ್ಧೂರಿ ಸಮಾರಂಭದಲ್ಲಿ ಹಿರಿಯ ನಟ ಧರ್ಮೇಂದ್ರ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಅಂಬಾನಿ ದಂಪತಿ, ಸಲ್ಮಾನ್ ಖಾನ್ ಮತ್ತು ಕಂಗನಾ ರಣಾವತ್ ಸೇರಿದಂತೆ ಹಿಂದಿ ಚಿತ್ರರಂಗದ ಖ್ಯಾತನಾಮರು ಕಂಡುಬಂದರು. ವಿಶ್ವಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ನಟ ಶಾರುಖ್ ಖಾನ್ ಪತ್ನಿ ಗೌರಿ ಜೊತೆ ಆಗಮಿಸಿದ್ದರು.
ಶಾರುಖ್ ಹಾಗು ಗೌರಿ ಅಂಪತಿ ಅಮೀರ್ ಖಾನ್ ಜೊತೆ ನಿಂತು ಕ್ಯಾಮರಾಗಳಿಗೆ ಪೋಸ್ ಕೊಟ್ಟರು. ಈ ಸಂದರ್ಭದಲ್ಲಿ ಅಮೀರ್ ಅವರೊಂದಿಗೆ ಕೆಲಕಾಲ ಹರಟಿದರು. ಶಾರುಖ್ ಬಿಳಿ ಶರ್ಟ್, ಬ್ಲ್ಯಾಕ್ ವೈಸ್ಟ್ ಕೋಟ್, ಮ್ಯಾಚಿಂಗ್ ಜಾಕೆಟ್ ಮತ್ತು ಪ್ಯಾಂಟ್ ಧರಿಸಿ ಸ್ಮಾರ್ಟ್ ಲುಕ್ ಕೊಟ್ಟರು. ಸಲ್ಮಾನ್ ಖಾನ್ ಬ್ಲ್ಯಾಕ್ ಸೂಟ್ ಬೂಟ್ನಲ್ಲಿ ಗಮನ ಸೆಳೆದರು.
ರಣ್ಬೀರ್ ಕಪೂರ್, ಕತ್ರಿನಾ ಕೈಫ್, ಜಯಾ ಬಚ್ಚನ್, ಸುಶ್ಮಿತಾ ಸೇನ್, ನಾಗ ಚೈತನ್ಯ, ಫರ್ಹಾನ್ ಅಖ್ತರ್, ಅನಿಲ್ ಕಪೂರ್, ಎ.ಆರ್.ರೆಹಮಾನ್, ಮಾಧುರಿ ದೀಕ್ಷಿತ್, ಸೈರಾ ಬಾಯಿನೋ, ರೇಖಾ ಸೇರಿದಂತೆ ಅನೇಕ ಹಿರಿ-ಕಿರಿಯ ಕಲಾವಿದರು ಕಾಣಿಸಿಕೊಂಡರು. ಕ್ರಿಕೆಟಿಗರಾದ ಶಿಖರ್ ಧವನ್, ಜಹೀರ್ ಖಾನ್ ಇದ್ದರು.