ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಪುತ್ರಿ ಇರಾ ಖಾನ್ ಇಂದು ದಾಂಪತ್ಯ ಜೀವನ ಆರಂಭಿಸಲಿದ್ದಾರೆ. ಈಗಾಗಲೇ ಹಲವು ಶಾಸ್ತ್ರಗಳು, ಮದುವೆ ಮುಂಚಿನ ಈವೆಂಟ್ಗಳು ನಡೆದಿವೆ. ಇಂದು ಮದುವೆಯ ಸಂಭ್ರಮ ಮನೆ ಮಾಡಿದೆ. ವಿವಾಹದ ಫೋಟೋ - ವಿಡಿಯೋಗಳನ್ನು ಅಭಿಮಾನಿಗಳು, ನೆಟ್ಟಿಗರು ನಿರೀಕ್ಷಿಸಿದ್ದಾರೆ. ಮದುವೆ ಮುನ್ನದ ಹಲವು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.
ಇರಾ ಖಾನ್ ಅವರು ತಮ್ಮ ದೀರ್ಘಕಾಲದ ಗೆಳೆಯ, ನಿಶ್ಚಿತ ವರ ನೂಪುರ್ ಶಿಖರೆ ಅವರೊಂದಿಗೆ ಇಂದು ವಿವಾಹ ಆಗಲಿದ್ದಾರೆ. ನಿನ್ನೆ, ಮಂಗಳವಾರ ರಾತ್ರಿ, ಅಮೀರ್ ಮತ್ತು ಮಗ ಜುನೈದ್ ಅವರು ಇರಾ ಅವರ ಮೆಹೆಂದಿ ಸಮಾರಂಭಕ್ಕೆ ಆಗಮಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಜುನೈದ್ ಮತ್ತು ಇರಾ ಅವರು ಅಮೀರ್ ಖಾನ್ ಮತ್ತು ರೀನಾ ದತ್ತಾ ದಂಪತಿ (ವಿಚ್ಛೇದಿತ)ಯ ಮಕ್ಕಳು. ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಷ್ಟ್ ಖ್ಯಾತಿಯ ಅಮೀರ್ ಖಾನ್ ಎರಡು ವಿವಾಹ ಆಗಿ, ವಿಚ್ಛೇದನ ಪಡೆದಿರೋದು ನಿಮಗೆ ತಿಳಿದಿರುವ ವಿಚಾರವೇ. ಅದಾಗ್ಯೂ ಕುಟುಂಬಕ್ಕೆ ಸಂಪೂರ್ಣ ಸಮಯ ಮೀಸಲಿಟ್ಟಿದ್ದಾರೆ. ಅಪರೂಪಕ್ಕೆ ತಮ್ಮ ವಿಚ್ಛೇದಿತ ಪತ್ನಿಯರೊಂದಿಗೆ ಕಾಣಿಸಿಕೊಳ್ಳುತ್ತಾರೆ. ಇದೀಗ ಇರಾ ಖಾನ್ ಮದುವೆಗೆ ಸಂಪೂರ್ಣ ಕುಟುಂಬ ಒಟ್ಟುಗೂಡಿ, ಸಿದ್ಧತೆ ನಡೆಸಿದೆ.
ಆನ್ಲೈನ್ನಲ್ಲಿ ವೈರಲ್ ಆಗುತ್ತಿರುವ ಮತ್ತೊಂದು ವಿಡಿಯೋದಲ್ಲಿ, ಅಮೀರ್ ಖಾನ್ ಅವರ ಎರಡನೇ ಪತ್ನಿ (ವಿಚ್ಛೇದಿತ) ಕಿರಣ್ ರಾವ್ ಮತ್ತು ಮಗ ಆಜಾದ್ ಕೂಡ ಕಾರಿನಲ್ಲಿ ಆಗಮಿಸಿರೋದನ್ನು ಕಾಣಬಹುದು. ತಾಯಿ ಮಗ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು. ಇತ್ತೀಚೆಗಷ್ಟೇ ಅಮೀರ್ ಪಾಪರಾಜಿಗಳ ಕ್ಯಾಮರಾಗೆ ಬಹಳ ಖುಷಿಯಿಂದ ಪೋಸ್ ಕೊಟ್ಟಿದ್ದು, ಈ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದೆ. ಛಾಯಾಗ್ರಾಹಕರನ್ನು ಕಂಡೊಡನೆ ಕೈ ಬೀಸಿ ಮುಗುಳ್ನಕ್ಕರು.