ಮುಂಬೈ (ಮಹಾರಾಷ್ಟ್ರ): ಹಾಲಿವುಡ್ನ ಬಿಗ್ ಬಜೆಟ್ ಮೂವಿಗಳಲ್ಲಿ ಒಂದಾದ 'ಓಪನ್‌ಹೈಮರ್' ಇದೀಗ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಗಂಭೀರ ಆರೋಪ ಎದುರಿಸುತ್ತಿದ್ದು ವಿವಾದದಲ್ಲಿ ಸಿಲುಕಿದೆ. ಜುಲೈ 21ರಂದು ವಿಶ್ವಾದ್ಯಂತ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಓಪನ್‌ಹೈಮರ್’ ಅಭಿಮಾನಿಗಳು, ವಿಮರ್ಶಕರಿಂದ ಮೆಚ್ಚಗೆಯನ್ನೇನೋ ಪಡೆಯಿತು. ಆದರೆ ಅದಕ್ಕೂ ಮಿಗಿಲಾಗಿ ಹಿಂದುಗಳ ಪವಿತ್ರ ಗ್ರಂಥ 'ಭಗವದ್ಗೀತೆ'ಗೆ ಅವಮಾನ ಮಾಡಿರುವುದು ಭಾರತೀಯ ವೀಕ್ಷಕರ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ.
ಅಂಥದ್ದೇನಿದೆ? :ಸಾಮಾಜಿಕ ಮಾಧ್ಯಮದ ವರದಿಗಳ ಪ್ರಕಾರ, ಚಲನಚಿತ್ರದಲ್ಲಿ ಮಹಿಳೆಯು ಲೈಂಗಿಕ ಕ್ರಿಯೆಯ ದೃಶ್ಯದಲ್ಲಿ ಪುರುಷನಿಗೆ ಭಗವದ್ಗೀತೆಯನ್ನು ಜೋರಾಗಿ ಓದುವಂತೆ ಹೇಳುವಂತಿದೆ. ವಿಜ್ಞಾನಿಗಳ ಜೀವನವನ್ನು ಆಧರಿಸಿದ ಚಿತ್ರ ಇಗಿದ್ದು, ಅಶ್ಲೀಲ ದೃಶ್ಯದಲ್ಲಿ ಮಹಿಳೆ ಒಂದು ಕೈಯಲ್ಲಿ ಭಗವದ್ಗೀತೆಯ ಪ್ರತಿಯನ್ನು ಹಿಡಿದಿರುವುದು ಹಿಂದು ಧರ್ಮೀಯರ ಭಾವನೆಗಳನ್ನು ಘಾಸಿಗೊಳಿಸಿದೆ ಎಂಬುದು ಆಕ್ಷೇಪ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, "ಇದು ಬಾಲಿವುಡ್ ಚಿತ್ರದಲ್ಲಿನ ದೃಶ್ಯವಾಗಿದ್ದರೆ ಪ್ರದರ್ಶಿಸುವ ಥಿಯೇಟರ್‌ಗಳನ್ನು ಸುಟ್ಟು ಹಾಕಲಾಗುತ್ತಿತ್ತು" ಎಂದು ಟ್ವೀಟ್ ಮಾಡಿದ್ದಾರೆ. "ಕಲೆಗೆ ಯಾವುದೇ ಗಡಿ ಇಲ್ಲ, ಆದರೆ ಓಪನ್‌ಹೈಮರ್‌ನ ಭಗವದ್ಗೀತೆಯ ದೃಶ್ಯವು ಸೃಜನಶೀಲ ಅಭಿವ್ಯಕ್ತಿಯ ಮಿತಿಗಳನ್ನು ಪರೀಕ್ಷಿಸುತ್ತದೆ" ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.