ರಣ್ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯ ಬಹುನಿರೀಕ್ಷಿತ ಸಿನಿಮಾ ಅನಿಮಲ್ ಡಿಸೆಂಬರ್ 1 ರಂದು ತೆರೆಗಪ್ಪಳಿಸಲಿದೆ. ಭರ್ಜರಿ ಪ್ರಚಾರದ ಮೂಲಕ ಗಮನ ಸೆಳೆಯುತ್ತಿರುವ 'ಅನಿಮಲ್' ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ನಿಂದ 'A' ಸರ್ಟಿಫಿಕೇಟ್ ಪಡೆದಿದೆ ಎಂದು ಚಿತ್ರನಿರ್ಮಾಪಕರು ಈಗಾಗಲೇ ಮಾಹಿತಿ ಹಂಚಿಕೊಂಡಿದ್ದಾರೆ. ಇದೀಗ, ಸಿಬಿಎಫ್ಸಿ ಸಲಹೆ ಪ್ರಕಾರ ಪ್ರಮಾಣೀಕರಣಕ್ಕೂ ಮುನ್ನ ಸಿನಿಮಾದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ ಎಂಬುದನ್ನು ಹಂಚಿಕೊಂಡಿದ್ದಾರೆ. ತೀರಾ ಆತ್ಮೀಯ ದೃಶ್ಯಗಳನ್ನೂ (intimate scene) ಕಟ್ ಮಾಡಲಾಗಿದೆ.
ವರದಿಗಳ ಪ್ರಕಾರ, ಚಿತ್ರದಲ್ಲಿನ ಕೆಲ ಪದಗಳಲ್ಲಿ ಬದಲಾವಣೆ ತರಲಾಗಿದೆ. ಬ್ಲ್ಯಾಕ್ ಮತ್ತು ಕಾಸ್ಟೂಮ್ ವರ್ಡ್ಸ್ ನಲ್ಲಿ ಮಾರ್ಪಾಡು ಮಾಡಲಾಗಿದೆ. ಬ್ಲ್ಯಾಕ್ ಪದವನ್ನು ಹೇಗೆ ಮಾರ್ಪಡಿಸಲಾಗಿದೆ ಎಂಬುದನ್ನು ವಿವರಿಸದಿದ್ದರೂ, 'ಕಾಸ್ಟ್ಯೂಮ್' ಬದಲಿಗೆ 'ವಸ್ತ್ರ' ಎಂದು ಬಳಸಲಾಗಿದೆ. ಅಲ್ಲದೇ, "ಕಭಿ ನಹಿ" ಮತ್ತು "ಕ್ಯಾ ಬೋಲ್ ರಹೇ ಹೋ ಆಪ್" ನಂತಹ ಕೆಲ ಡೈಲಾಗ್ಸ್ನಲ್ಲಿಯೂ ಬದಲಾವಣೆಗಳಾಗಿವೆ. ಡೈಲಾಗ್‌ಗಳಿಗೆ ತಕ್ಕಂತೆ ಸಿನಿಮಾದ ಸಬ್ ಟೈಟಲ್ಸ್ ಅನ್ನೂ ಬದಲಾಯಿಸಲಾಗಿದೆ. "ನಾಟಕ್" ಪದವನ್ನು ಮ್ಯೂಟ್ ಮಾಡಲಾಗಿದೆ. ಸಬ್ ಟೈಟಲ್ಗಳಲ್ಲಿ ಒಂದನ್ನು "ನೀವು ತಿಂಗಳಿಗೆ ನಾಲ್ಕು ಬಾರಿ ಪ್ಯಾಡ್ ಬದಲಾಯಿಸುತ್ತೀರಿ" ಎಂದು ಬದಲಾಯಿಸಲಾಗಿದೆ. ಮೊದಲಿದ್ದ ಸಬ್ಟೈಟಲ್ ಏನೆಂಬುದು ಸ್ಪಷ್ಟವಾಗಿಲ್ಲ.
ವಿಜಯ್ ಮತ್ತು ಜೋಯಾ ಪಾತ್ರಗಳ ಇಂಟಿಮೇಟ್ ಸೀನ್ಗಳನ್ನೂ ಡಿಲೀಟ್ ಮಾಡಲಾಗಿದೆ. ಚಿತ್ರದಲ್ಲಿ ಈ ಪಾತ್ರಗಳ ಪ್ರಾಮುಖ್ಯತೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಸಿನಿಮಾದ ಫೈನಲ್ ಕಟ್ ಸುಮಾರು 203 ನಿಮಿಷಗಳಿವೆ. ಅಂದರೆ 3 ಗಂಟೆ 21 ನಿಮಿಷಗಳಿವೆ. ಯುನೈಟೆಡ್ ಕಿಂಗ್‌ಡಂನಲ್ಲಿ ಸಿನಿಮಾ 18+ ರೇಟಿಂಗ್ ಪಡೆದುಕೊಂಡಿದೆ. ಸಿನಿಮಾವನ್ನು "strong bloody violence" ಎಂದು ವಿವರಿಸಲಾಗಿದೆ. ಚಿತ್ರದಲ್ಲಿ ಹಿಂಸೆ, ಲೈಂಗಿಕ ಹಿಂಸೆ, ಲೈಂಗಿಕ ಬೆದರಿಕೆ, ಗಾಯಗಳ ದೃಶ್ಯಗಳು ಹೆಚ್ಚಿವೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.