ಗೋವಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 54ನೇ ವರ್ಷದ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ 2023ಕ್ಕೆ ಸೋಮವಾರ ಚಾಲನೆ ಸಿಕ್ಕಿದೆ. ಈ ಸಿನಿಮೋತ್ಸವದಲ್ಲಿ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರಿಗೆ 'ವಿಶೇಷ ಮನ್ನಣೆ ಪ್ರಶಸ್ತಿ'ಯನ್ನು ನೀಡಿ ಗೌರವಿಸಲಾಯಿತು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಪ್ರಶಸ್ತಿ ಪ್ರದಾನ ಮಾಡಿದರು. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಡಾ.ಎಲ್.ಮುರುಗನ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉಪಸ್ಥಿತರಿದ್ದರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಸಂತಸ ವ್ಯಕ್ತಪಡಿಸಿದ ಮಾಧುರಿ ದೀಕ್ಷಿತ್, "ಈ ಪ್ರಶಸ್ತಿಯನ್ನು ಅತ್ಯಂತ ಗೌರವದಿಂದ ಸ್ವೀಕರಿಸುತ್ತೇನೆ. ಇಂತಹ ಪ್ರಶಸ್ತಿಗಳು ಯಾವಾಗಲೂ ನಮ್ಮನ್ನು ಪ್ರೋತ್ಸಾಹಿಸುತ್ತವೆ. ಇನ್ನಷ್ಟು ಉತ್ತಮ ಹಾಗೂ ಒಳ್ಳೆಯ ಕೆಲಸ ಮಾಡಲು ಸ್ಫೂರ್ತಿ ನೀಡುತ್ತವೆ" ಎಂದು ಹೇಳಿದರು.
ಅನುರಾಗ್ ಠಾಕೂರ್ ಶ್ಲಾಘನೆ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಮಾಧುರಿ ದೀಕ್ಷಿತ್ ಅವರ ನಟನಾ ಕೌಶಲ್ಯ ಮತ್ತು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. "ಮಾಧುರಿ ದೀಕ್ಷಿತ್ ಯುಗಯುಗಾಂತರಕ್ಕೂ ಒಂದು ಐಕಾನ್. ನಾಲ್ಕು ದಶಕಗಳಿಂದ ತಮ್ಮ ಅದ್ಭುತ ಮತ್ತು ಅಪ್ರತಿಮ ಪ್ರತಿಭೆಯೊಂದಿಗೆ ಪರದೆಯನ್ನು ಅಲಂಕರಿಸಿದ್ದಾರೆ. ನಿಶಾದಿಂದ ಹಿಡಿದು ಮನಮೋಹಕ ಚಂದ್ರಮುಖಿಯವರೆಗೆ, ಬೇಗಂ ಪಾರಾದಿಂದ ರಜ್ಜೋವರೆಗೆ, ಅವರ ಬಹುಮುಖ ಪ್ರತಿಭೆಗೆ ಯಾವುದೇ ಮಿತಿಯಿಲ್ಲ" ಎಂದು ತಿಳಿಸಿದರು.
"ಇಂತಹ ಅಮೋಘ ನಟಿ ಮಾಧುರಿ ದೀಕ್ಷಿತ್ ಅವರಿಗೆ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆಗಾಗಿ ವಿಶೇಷ ಮನ್ನಣೆ ಪ್ರಶಸ್ತಿಯನ್ನು ನೀಡುವಾಗ ನಮಗೆ ಹೆಮ್ಮೆಯಾಗಿದೆ. ಅಸಾಧಾರಣ ಪ್ರಯಾಣದ ಆಚರಣೆ, ಶಾಶ್ವತ ಪರಂಪರೆಗೆ ಗೌರವ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.