ಬಹುನಿರೀಕ್ಷಿತ 'ಸಲಾರ್' ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರಭಾಸ್ ಅಭಿಮಾನಿಗಳು ಮತ್ತು ಸಿನಿಪ್ರೇಮಿಗಳು ಸಿನಿಮಾ ವೀಕ್ಷಣೆಗೆ ಕಾತುರದಿಂದ ಕಾಯುತ್ತಿದ್ದಾರೆ. ಭಾರಿ ನಿರೀಕ್ಷೆಗಳ ನಡುವೆ ಸಿನಿಮಾ ವಿಶ್ವದಾದ್ಯಂತ ನಾಳೆ ಮುಂಜಾನೆ ಬಿಡುಗಡೆಯಾಗುತ್ತಿದೆ. ಬಿಗ್ ಪ್ರಾಜೆಕ್ಟ್ ಕುರಿತ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ತಿಳಿದುಕೊಳ್ಳೋಣ.
15 ವರ್ಷ ಹಿಂದಿನ ಯೋಚನೆ:ಸಲಾರ್ ಚಿತ್ರಕಥೆಯನ್ನು ಸುಮಾರು 15 ವರ್ಷಗಳ ಹಿಂದೆಯೇ ನಿರ್ಧರಿಸಲಾಗಿತ್ತು. ಆ ಸಂದರ್ಭದಲ್ಲಿ ಪ್ರಶಾಂತ್ ನೀಲ್ ನಿರ್ದೇಶಕರಾಗಿರಲಿಲ್ಲ. ನಿರ್ದೇಶಕನಾಗಿ ಮೊದಲ ಹೆಜ್ಜೆ ಇಡುವ ಸಂದರ್ಭ ಇಷ್ಟು ದೊಡ್ಡ ಕಥೆ ಹೇಳಲು ಬಜೆಟ್ ವಿಚಾರವಾಗಿ ಕೆಲವು ಇತಿಮಿತಿಗಳು ಎದುರಾಗಿದ್ದವು. ಹಾಗಾಗಿ ಒಂದಷ್ಟು ಸಿನಿಮಾಗಳನ್ನು ಮಾಡಿದ ನಂತರ ಪ್ರೇಕ್ಷಕರಿಗೆ ಸಲಾರ್ ಜಗತ್ತನ್ನು ಪರಿಚಯಿಸಬೇಕು ಎಂದುಕೊಂಡಿದ್ದರಂತೆ. 'ಉಗ್ರಂ' ಮೂಲಕ ಮೊಟ್ಟಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟ ಪ್ರಶಾಂತ್ ನೀಲ್ ಯಶಸ್ಸಿನ ಹಾದಿಯಲ್ಲಿ ಮುಂದುವರಿಯುತ್ತಿದ್ದು, ಒಂದೂವರೆ ದಶಕದ ಹಿಂದಿನ ಕನಸನ್ನು ಸಾಕಾರಗೊಳಿಸುವ ಕ್ಷಣಗಳ ಸಮೀಪ ಬಂದಿದ್ದಾರೆ.
ದೇವ ಪಾತ್ರಕ್ಕೆ ಪ್ರಭಾಸ್ ಫಿಟ್:ಪ್ರಭಾಸ್ ಅವರನ್ನು ಈ ಚಿತ್ರಕ್ಕೆ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಪ್ಯಾನ್ ಇಂಡಿಯಾ ನಟ ಕಾನ್ಸೆಪ್ಟ್ ಸಲುವಾಗಿ ಅಲ್ಲ, ಬದಲಾಗಿ 'ದೇವ' ಪಾತ್ರದ ಸಲುವಾಗಿ ಚಿತ್ರಕ್ಕೆ ಆಯ್ದುಕೊಳ್ಳಲಾಗಿದೆ. ಸಿನಿಮಾವನ್ನು ಮೊದಲು ಎರಡು ಭಾಗಗಳಲ್ಲಿ ತರಲು ನಿರ್ಧರಿಸರಿರಲಿಲ್ಲ. ಚಿತ್ರೀಕರಣದ ವೇಳೆ ಸಿನಿಮಾವನ್ನು ಎರಡು ಭಾಗಗಳಲ್ಲಿ ತೋರಿಸಲು ತೀರ್ಮಾನಿಸಲಾಗಿತ್ತು.
ಕೆಜಿಎಫ್-ಸಲಾರ್ ನಡುವೆ ಲಿಂಕ್?: ಪ್ರಚಾರದ ಭಾಗಗಳಾದ ಗ್ಲಿಂಪ್ಸ್, ಟೀಸರ್, ಪೋಸ್ಟರ್ಗಳೆಲ್ಲ ಬಿಡುಗಡೆಯಾದಾಗ ಕೆಜಿಎಫ್ ಮತ್ತು ಸಲಾರ್ ನಡುವೆ ಏನೋ ಸಂಬಂಧ ಇದೆ ಎಂದು ಹಲವರು ಊಹಿಸಿದ್ದರು. ಆದ್ರೆ, ಈ ಎರಡೂ ಸಿನಿಮಾಗಳಿಗೆ ಅಂತಹ ಯಾವುದೇ ಸಂಬಂಧವಿಲ್ಲ ಎಂದು ನಿರ್ದೇಶಕರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, 'ಉಗ್ರಂ' ರಿಮೇಕ್ ಅಲ್ಲ ಎಂಬುದಾಗಿಯೂ ಸ್ಪಷ್ಟನೆ ಕೊಟ್ಟಿದ್ದಾರೆ. ಇನ್ನು, ಯಶ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕೂಡ ಊಹಾಪೋಹಗಳಿಗೆ ಸೀಮಿತ.
ಕಥೆಯಲ್ಲಿ ರೊಮ್ಯಾನ್ಸ್?: ಪ್ರಭಾಸ್ ಮತ್ತು ಶ್ರುತಿ ಹಾಸನ್ ಜೋಡಿಯ ವಿಶೇಷ ಹಾಡನ್ನು ಚಿತ್ರಿಸಲು ಚಿತ್ರತಂಡ ಬಯಸಿತ್ತು. ಆದ್ರೆ ಭಾವನಾತ್ಮಕ ಕಥೆಯಲ್ಲಿ ಇಂತಹ ಹಾಡು ಹಾಕಿದರೆ, ಕಥೆ ಹೇಳುವ ರೀತಿಗೆ ಅಡ್ಡಿಯಾಗಬಹುದು ಎಂದು ಯೋಚಿಸಿ ಆ ವಿಚಾರವನ್ನು ಅಲ್ಲಿಗೇ ಕೈಬಿಟ್ಟರು. ಶ್ರುತಿ ಹಾಸನ್ ಆದ್ಯಾ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.