ಕರ್ನಾಟಕ

karnataka

ETV Bharat / entertainment

'ಸಿನಿಮಾ ಕ್ಷೇತ್ರಕ್ಕೆ ಬಾರದೇ ಇರ್ತಿದ್ರೆ___ಆಗುತ್ತಿದ್ದೆ': ಸಲಾರ್ ನಟ ಪೃಥ್ವಿರಾಜ್​ ಸುಕುಮಾರನ್ - ಪ್ರಭಾಸ್

'ಸಲಾರ್​' ಸಿನಿಮಾದಲ್ಲಿ ನಟಿಸಿರುವ ಮಾಲಿವುಡ್​ ನಟ ಪೃಥ್ವಿರಾಜ್​ ಸುಕುಮಾರನ್​ ತಮ್ಮ ವೃತ್ತಿಜೀವನದ ಬಗ್ಗೆ ಕೆಲವು ಇಂಟ್ರಸ್ಟಿಂಗ್​ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

interesting facts about salaar Actor Prithviraj Sukumaran
'ಸಿನಿಮಾ ಕ್ಷೇತ್ರಕ್ಕೆ ಬಾರದೇ ಇರ್ತಿದ್ರೆ ಟ್ರಾವೆಲ್ ಬ್ಲಾಗರ್ ಆಗುತ್ತಿದ್ದೆ': ಪೃಥ್ವಿರಾಜ್​ ಮನದಾಳ

By ETV Bharat Karnataka Team

Published : Dec 17, 2023, 6:23 PM IST

ಭಾರತೀಯ ಚಿತ್ರರಂಗದಲ್ಲಿ ಅದ್ಭುತ ನಟನೆಯ ಮೂಲಕ ಪ್ರೇಕ್ಷಕರಿಗೆ ಸನಿಹವಾಗಿರುವ ನಟ ಪೃಥ್ವಿರಾಜ್​ ಸುಕುಮಾರನ್​. ಇವರು ನಿರ್ದೇಶಕ, ನಿರ್ಮಾಪಕನಾಗಿ ಮಾತ್ರವಲ್ಲದೇ ಉತ್ತಮ ಗಾಯಕನಾಗಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ಪ್ರಶಾಂತ್​ ನೀಲ್​ ನಿರ್ದೇಶನದ, ಪ್ರಭಾಸ್​ ನಟನೆಯ 'ಸಲಾರ್' ಸಿನಿಮಾದ ಮೂಲಕ ತೆರೆ ಮೇಲೆ ಸದ್ದು ಮಾಡಲು ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲಿ ವೃತ್ತಿ ಜೀವನದ ಬಗ್ಗೆ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

"ನಾವು ಕೇರಳದವರು. ತಂದೆ ಸುಕುಮಾರನ್​ ನಟ. ತಾಯಿ ಮಲ್ಲಿಕಾ, ಅಣ್ಣ ಇಂದ್ರಜಿತ್​, ಅತ್ತಿಗೆ ಪೂರ್ಣಿಮಾ ಎಲ್ಲರೂ ಕಲಾವಿದರೇ. ಹಾಗಾಗಿ ನನಗೆ ಈ ಕ್ಷೇತ್ರಕ್ಕೆ ಬರಲು ಇಷ್ಟವಿರಲಿಲ್ಲ. ಬೇರೆ ಏನಾದರೂ ಮಾಡಬೇಕು ಎಂದುಕೊಂಡೆ. ಹಾಗಾಗಿ ಮಾಹಿತಿ ತಂತ್ರಜ್ಞಾನದಲ್ಲಿ ಪದವಿ ಪಡೆಯಲು ಆಸ್ಟ್ರೇಲಿಯಾಗೆ ಹೋದೆ. ಅಲ್ಲಿ ಓದುತ್ತಿರುವಾಗ ರಂಜಿತ್​ ಎಂಬ ನಿರ್ದೇಶಕರಿಂದ ಆಡಿಷನ್​ಗೆ ಕರೆ ಬಂತು. ಮೋಜು-ಮಸ್ತಿ ಮಾಡೋಣ ಎಂದುಕೊಂಡು ಸ್ಕ್ರೀನ್​ ಟೆಸ್ಟ್​ಗೆ ಹೋದೆ. ಅದುವೇ 'ನಂದನಮ್​' ಸಿನಿಮಾ. ಅಲ್ಲಿಂದ ಸಿನಿಮಾ ಲೋಕಕ್ಕೆ ಪ್ರವೇಶ ಪಡೆದೆ."

'ಟ್ರಾವೆಲ್ ಬ್ಲಾಗರ್ ಆಗುತ್ತಿದ್ದೆ': "ನನ್ನ ಪತ್ನಿ ಸುಪ್ರಿಯಾ ಮೆನನ್​ ಒಂದು ಕಾಲದಲ್ಲಿ ಪತ್ರಕರ್ತೆಯಾಗಿದ್ದರು. ಅವರೊಂದಿಗಿನ ಪರಿಚಯ ನಂತರ ಪ್ರೇಮಕ್ಕೆ ತಿರುಗಿತು. ಬಳಿಕ ನಾವಿಬ್ಬರು ಮದುವೆಯಾದೆವು. ಸುಪ್ರಿಯಾ ಅವರಿಂದಲೇ ನಾನು ಈ ಮಟ್ಟಕ್ಕೆ ಬಂದಿದ್ದೇನೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಅವರ ಹೆಸರಿನಲ್ಲಿ ಸುಕುಮಾರನ್​ಗಿಂತ ಮೊದಲು ಮೆನನ್​ ಇರಬೇಕು ಎಂದು ಮದುವೆಯಾದ ಮೇಲೂ ಹಾಗೆಯೇ ಬಿಟ್ಟಿದ್ದೆ. ಇದಕ್ಕಾಗಿ ಕೆಲವರು ನನ್ನನ್ನು ಟೀಕಿಸಿದ್ದರು. ನಾನು ಅವರನ್ನೆಲ್ಲಾ ನಿರ್ಲಕ್ಷಿಸಿದೆ. ಒಂದು ವೇಳೆ ನಾನು ಸಿನಿಮಾ ಕ್ಷೇತ್ರಕ್ಕೆ ಬಾರದೇ ಇರುತ್ತಿದ್ದರೆ, ಟ್ರಾವೆಲ್ ಬ್ಲಾಗರ್ ಆಗಿರುತ್ತಿದ್ದೆ."

'ಸಿನಿಮಾ ನನ್ನ ಪ್ರಪಂಚವಾಯಿತು': "ನಾನು ಟ್ರಾವೆಲ್​ ಮಾಡಲು ಹೆಚ್ಚು ಇಷ್ಟಪಡುತ್ತೇನೆ. ಎಲ್ಲಿಗಾದರೂ ಭೇಟಿ ನೀಡಿದರೆ ಅಲ್ಲಿನ ಫೋಟೋಗಳನ್ನು ತೆಗೆಯುವುದರಲ್ಲಿ ನನಗೆ ವಿಪರೀತ ಆಸಕ್ತಿ. ಆಗಾಗ ಸುತ್ತಾಡುವುದು, ಅಪರಿಚಿತರೊಂದಿಗೆ ಮಾತನಾಡುವುದು ಕೂಡ ನನಗಿಷ್ಟ. ಇದರಿಂದ ನನಗೆ ಬಹಳಷ್ಟು ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಇಂಡಸ್ಟ್ರಿಗೆ ಬಂದ ಪ್ರಾರಂಭದಲ್ಲಿ ನಾನು ಸಿನಿಮಾಗಳನ್ನು ಒಪ್ಪಿಕೊಳ್ಳುವ ಮುನ್ನ ಇದೇ ನನ್ನ ಕೊನೆಯ ಸಿನಿಮಾ ಎಂದೇ ಒಪ್ಪಿಕೊಳ್ಳುತ್ತಿದ್ದೆ. ಅದನ್ನು ಪೂರ್ಣಗೊಳಿಸಿದ ನಂತರ ಮತ್ತೆ ಆಸ್ಟ್ರೇಲಿಯಾ ಹೋಗಬೇಕು ಎಂದುಕೊಂಡಿದ್ದೆ. ಆದರೆ, ಹೊಸ ಹೊಸ ಸಿನಿಮಾ ಮಾಡುತ್ತಾ ಹೋದಂತೆ ಕ್ರಮೇಣ ಇದೇ ನನ್ನ ಪ್ರಪಂಚವಾಯಿತು. ದಿನಗಳು ಕಳೆದಂತೆ ನಿರ್ದೇಶನ, ನಿರ್ಮಾಣ ಮತ್ತು ಗಾಯನ ಕ್ಷೇತ್ರಗಳಲ್ಲೂ ನನ್ನನ್ನು ಸಾಬೀತುಪಡಿಸಿಕೊಳ್ಳಲು ಪ್ರಯತ್ನಿಸಿದೆ."

"ನಾನು ಶಾಲೆಯಲ್ಲಿ ಓದುತ್ತಿದ್ದಾಗ ವಾರ್ಷಿಕೋತ್ಸವ ಬಂತೆಂದರೆ ಸಾಕು, ಅಣ್ಣನ ಜೊತೆ ಅನೇಕ ನಾಟಕಗಳಲ್ಲಿ ನಟಿಸಲು ತಯಾರಾಗುತ್ತಿದ್ದೆ. ಅಲ್ಲದೇ ಭಾಷಣ ಮತ್ತು ಚರ್ಚೆಗಳಲ್ಲೂ ನನ್ನ ಹೆಸರಿರುತ್ತಿತ್ತು. ಇಂಡಸ್ಟ್ರಿಯಲ್ಲಿ ದುಲ್ಕರ್​ ಸಲ್ಮಾನ್​ ನನ್ನ ಸ್ನೇಹಿತ. ಮೊದಲಿನಿಂದಲೂ ಐಷಾರಾಮಿ ಕಾರು, ಬೈಕ್​ ಪರ್ಚೇಸ್​ ಮಾಡುವುದೆಂದರೆ ನನಗೆ ತುಂಬಾ ಇಷ್ಟ. ಲಂಬೋರ್ಗಿನಿ, ಪೋರ್ಷೆ, ಲ್ಯಾಂಡ್ ರೋವರ್ ಡಿಫೆಂಡರ್ 110, ರೇಂಜ್ ರೋವರ್, ವೋಗ್, ಸಫಾರಿ, ಮಿನಿ ಕೂಪರ್, ಬಿಎಂಡಬ್ಲ್ಯು ಹೀಗೆ.."

"ಕೆಲವು ವರ್ಷಗಳ ಹಿಂದೆ ನಾವು ನಿರ್ಮಿಸಿದ್ದ ಲೂಸಿಫರ್​ ಸಿನಿಮಾವನ್ನು ತೆಲುಗು ಭಾಷೆಯಲ್ಲೂ ರಿಮೇಕ್​ ಮಾಡಲು ಯೋಚಿಸಿದೆವು. ಚಿರಂಜೀವಿ ಸರ್​ ಈ ಚಿತ್ರದಲ್ಲಿ ನಟಿಸಿದರೆ ಒಳ್ಳೆಯದು ಎಂದು ನಾವು ಭಾವಿಸಿದ್ದೆವು. ಅಂತಿಮವಾಗಿ ಅದು ಕೂಡ ಸಂಭವಿಸಿತು. ಅವರ ಹೊರತು ಆ ಪಾತ್ರಕ್ಕೆ ಯಾರೂ ನ್ಯಾಯ ಕೊಡಲು ಸಾಧ್ಯವಿರಲಿಲ್ಲ. ಸಲಾರ್​ಗೂ ಮುನ್ನ ನಾನು ಪೊಲೀಸ್​ ಪೊಲೀಸ್​ ಎಂಬ ತೆಲುಗು ಸಿನಿಮಾದಲ್ಲಿ ನಟಿಸಿದ್ದೆ. ಉರುಮಿ, ಅಯ್ಯಪ್ಪನುಂ ಕೊಶಿಯುಂ, ಬ್ರೋಡ್ಯಾಡಿ ಮುಂತಾದ ಸಿನಿಮಾಗಳ ಮೂಲಕ ತೆಲುಗು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದೆ. ಇದೀಗ ಸಲಾರ್​ ಮೂಲಕ ಮತ್ತೂ ಹತ್ತಿರವಾಗಲು ಬಯಸುತ್ತೇನೆ" ಎಂದು ಪೃಥ್ವಿರಾಜ್​ ತಮ್ಮ ಮನದಾಳ ತೆರೆದಿಟ್ಟರು.

ಇದನ್ನೂ ಓದಿ:ಶೀಘ್ರದಲ್ಲೇ​ 'ಸಲಾರ್​' ಚಿತ್ರದ ಎರಡನೇ ಟ್ರೇಲರ್ ಬಿಡುಗಡೆ​; ಗರಿಗೆದರಿದ ಫ್ಯಾನ್ಸ್​ ನಿರೀಕ್ಷೆ

ABOUT THE AUTHOR

...view details