ಸುದೀಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಚಿತ್ರದ ಟ್ರೇಲರ್ ಏಪ್ರಿಲ್ 26ರಂದು ಬಿಡುಗಡೆ ಆಯಿತು. ಸಿನಿಮಾ ಬಿಡುಗಡೆಗೆ ಇನ್ನೆರಡೆ ದಿನ ಬಾಕಿ ಇದ್ದು, ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ತಮಿಳುನಾಡಿನಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದರೆ ಹಲವು ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ ಎಂದು ಗುಪ್ತಚರ ಇಲಾಖೆ ತಮಿಳುನಾಡು ಪೊಲೀಸರಿಗೆ ಎಚ್ಚರಿಕೆ ನೀಡಿದೆ. ಚಿತ್ರ ಬಿಡುಗಡೆಯಾಗುವ ಚಿತ್ರಮಂದಿರಗಳ ಪಟ್ಟಿಯನ್ನು ತೆಗೆದುಕೊಂಡು ಭದ್ರತೆಯನ್ನು ಹೆಚ್ಚಿಸಬಹುದೇ? ಅಥವಾ ಬೇರೆ ರೀತಿಯಲ್ಲಿ ನಿರ್ಧರಿಸುವುದೇ? ಎಂಬುದರ ಬಗ್ಗೆ ಸಮಾಲೋಚನೆ ನಡೆಯುತ್ತಿದೆ.
ವಿಪುಲ್ ಅಮೃತಲಾಲ್ ಶಾ ನಿರ್ಮಾಣದ, ಸುದೀಪ್ತೋ ಸೇನ್ ಆ್ಯಕ್ಷನ್ ಕಟ್ ಹೇಳಿರುವ ''ದಿ ಕೇರಳ ಸ್ಟೋರಿ'' ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿದೆ. ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ಮತ್ತು ಸಿದ್ಧಿ ಇದ್ನಾನಿ ಸೇರಿದಂತೆ ದೊಡ್ಡ ತಾರಾಬಳಗ ಹೊಂದಿದೆ. ಟ್ರೇಲರ್ ಸಾಕಷ್ಟು ಕುತೂಹಲ ಮೂಡಿಸುವುದರ ಜೊತೆಗೆ ಹಲವೆಡೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಹಿನ್ನೆಲೆ ತಮಿಳುನಾಡಿನಲ್ಲಿ 'ದಿ ಕೇರಳ ಸ್ಟೋರಿ' ತೆರೆ ಕಂಡ್ರೆ ಪ್ರತಿಭಟನೆಗಳು ನಡೆಯಲಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.
'ದಿ ಕೇರಳ ಸ್ಟೋರಿ' ಟ್ರೇಲರ್ನಲ್ಲೇನಿದೆ: ಸದ್ಯ ರಿಲೀಸ್ ಆಗಿರುವ ಟ್ರೇಲರ್‌ನಲ್ಲಿ ನಾಲ್ಕು ಯುವತಿಯರು ಕೇರಳದ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಕಾಲೇಜು ವಿದ್ಯಾಭ್ಯಾಸ ಪಡೆಯುತ್ತಿರುತ್ತಾರೆ. ಅದರಲ್ಲಿ ಮುಸ್ಲಿಂ ಯುವತಿಯರು ಕೇರಳದ ಹಿಂದೂ ಯುವತಿಯರನ್ನು ಮತಾಂತರಿಸಿ ಉಗ್ರ ಸಂಘಟನೆಗಳಿಗೆ (ISIS, ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ) ಸೇರಿಸುತ್ತಾರೆ. ಹಲವು ಮಹಿಳೆಯರನ್ನು ಇರಾಕ್ ಮತ್ತು ಸಿರಿಯಾಕ್ಕೆ ಕಳ್ಳಸಾಗಣೆ ಮಾಡುತ್ತಾರೆ. ಈ ಚಿತ್ರ ಸತ್ಯ ಘಟನೆ ಎಂದು ಹೇಳಲಾಗಿದ್ದು, ಇದುವರೆಗೆ 32,000 ಮಹಿಳೆಯರು ಹೀಗೆ ಮತಾಂತರಗೊಂಡಿದ್ದಾರೆ ಎನ್ನಲಾಗಿದೆ.
ಈ ಚಿತ್ರ ಬಿಡುಗಡೆಯನ್ನು ಖಂಡಿಸಿ ಹಲವು ಪಕ್ಷಗಳು ಪ್ರತಿಭಟನೆ ನಡೆಸಿವೆ. ಚಿತ್ರವನ್ನು ಬ್ಯಾನ್ ಮಾಡುವುದರಲ್ಲಿ ಅರ್ಥವಿಲ್ಲ ಮತ್ತು ಚಿತ್ರಮಂದಿರಗಳಲ್ಲಿ ನಿಷೇಧಿಸಿದರೆ, ಘೋಷಿಸಿದ ದಿನಾಂಕದಂದೇ OTT ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಕೇರಳ ಚಲನಚಿತ್ರ ಥಿಯೇಟರ್ ಮಾಲೀಕರು ಹೇಳಿದ್ದಾರೆ. ಅಲ್ಲದೇ ಈ ಸಿನಿಮಾವನ್ನು ಜನ ಖಂಡಿತ ನೋಡುತ್ತಾರೆ ಎಂದರು.