ಕೋಯಿಕ್ಕೋಡ್ (ಕೇರಳ): ಕನ್ನಡದ ಆಕ್ಷನ್ ಥ್ರಿಲ್ಲರ್ ಕಾಂತಾರ ಸಿನಿಮಾದ ವಿವಾದಾತ್ಮಕ ಹಾಡು ವರಾಹ ರೂಪಂ ಅನ್ನು ಚಿತ್ರಮಂದಿರಗಳಲ್ಲಿ ಹಾಗೂ ಒಟಿಟಿ ಮತ್ತು ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಸುವುದನ್ನು ನಿರ್ಬಂಧಿಸಿ ಕೇರಳದ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆಯನ್ನ ನೀಡಿದೆ. ಇದು ಹಕ್ಕುಸ್ವಾಮ್ಯ ಕಾಯ್ದೆಯ ಉಲ್ಲಂಘನೆ ಎಂದು ಉಲ್ಲೇಖಿಸಿ ಆದೇಶ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಕೆ ಇ ಸಾಲಿಹ್ ಅವರು ‘ವರಾಹ ರೂಪಂ’ ಹಾಡಿಗೆ ಅಳವಡಿಸಿದ ‘ನವರಸಂ’ ಟ್ರ್ಯಾಕ್‌ನ ಹಕ್ಕುಸ್ವಾಮ್ಯವನ್ನು ಹೊಂದಿರುವ ಮ್ಯೂಸಿಕ್ ಬ್ಯಾಂಡ್ ಥೈಕ್ಕುಡಂ ಬ್ರಿಡ್ಜ್, ಮಾತೃಭೂಮಿ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಕಂಪನಿ ಲಿಮಿಟೆಡ್‌ಗೆ ಸಹ ಕ್ರೆಡಿಟ್ ನೀಡಿ, ಸಮಂಜಸ ಹೇಳಿಕೆ ನೀಡಬೇಕು ಎಂದು ನಿರ್ದೇಶನ ನೀಡಿದರು.
ಕಳೆದ ವರ್ಷ ಸೆಪ್ಟೆಂಬರ್ 30 ರಂದು 'ಕಾಂತಾರ' ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕಾನೂನು ಹೋರಾಟ ಪ್ರಾರಂಭಿಸಲಾಯಿತು. ಕಳೆದ ವಾರ ವಿಚಾರಣೆ ನಡೆಸಿದ್ದ ಕೋಯಿಕ್ಕೋಡ್ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಸ್ ಸೂರಜ್, ಕೇಸ್ ಡೈರಿ ಪರಿಶೀಲಿಸಿದ ನಂತರ, ಕೃತಿಸ್ವಾಮ್ಯ ಕಾಯ್ದೆ 1957 ರ (ಹಕ್ಕುಸ್ವಾಮ್ಯ ಉಲ್ಲಂಘನೆ) ಸೆಕ್ಷನ್ 64 ರ ಅಡಿ ಕೃತಿಚೌರ್ಯದ ಹಾಡಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದರು. ಅಲ್ಲದೇ, ಡಿಜಿಟಲ್ ಹಕ್ಕುಗಳು, ಹಾಡಿನ ಕಂಪೋಸ್ಗೆ ಬಳಸಿದ ನೋಟ್ಗಳನ್ನು ಸಂಗ್ರಹಿಸುವಂತೆ ಏಪ್ರಿಲ್ 5 ರಂದು ತನಿಖಾಧಿಕಾರಿಗೆ ಹೇಳಿದ್ದರು. ಮೇ 4 ರ ಒಳಗಾಗಿ ತನಿಖೆಯ ಕುರಿತು ವರದಿಗಳನ್ನು ಸಲ್ಲಿಸುವಂತೆ ಸೂಚಿಸಿದ್ದರು.
ಇದನ್ನೂ ಓದಿ :ಕೇರಳ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾದ ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು