ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ಆರ್ಆರ್ಆರ್ ಸಿನಿಮಾದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ಇನ್ನೇನು ಕೆಲವೇ ಕ್ಷಣಗಳು ಬಾಕಿ ಉಳಿದಿವೆ. ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿಯನ್ನು ಪಡೆಯುವ ನಿರೀಕ್ಷೆಯಲ್ಲಿ ಇಡೀ ಭಾರತವೇ ಕಾಯುತ್ತಿದೆ. ಈ ಸುಸಂದರ್ಭದಲ್ಲಿ ನಾಟು ನಾಟು ಹಾಡಿನ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಅವರ ಬಗ್ಗೆ ತಿಳಿದುಕೊಳ್ಳಬೇಕಿದೆ. ಅವರ ಬಗ್ಗೆ ಕೆಲವು ಆಸಕ್ತಿದಾಯಕ ವಿಚಾರಗಳು ಇಲ್ಲಿವೆ.
ತೆಲುಗು ಬ್ಲಾಕ್ಬಸ್ಟರ್ ಆರ್ಆರ್ಆರ್ ಸಿನಿಮಾ ಯಶಸ್ಸಿನ ನಂತರ ಎಂಎಂ ಕೀರವಾಣಿ ಯಾರೆಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅವರಿಂದು ಈ ಖ್ಯಾತಿಯನ್ನು ಪಡೆಯಲು ಸಾಕಷ್ಟು ಪರಿಶ್ರಮಪಟ್ಟಿದ್ದಾರೆ. ಅನೇಕ ಸೋಲುಗಳನ್ನು ಕಂಡಿದ್ದಾರೆ. ಬಳಿಕ ಎಸ್ಎಸ್ ರಾಜಮೌಳಿ ಅವರ ಮಗಧೀರ, ಬಾಹುಬಲಿ, ಆರ್ಆರ್ಆರ್ನಂತಹ ಸೂಪರ್ಹಿಟ್ ಸಿನಿಮಾಗಳು ಕೀರವಾಣಿ ಅವರನ್ನು ಭಾರತದಲ್ಲಿ ಹೆಚ್ಚು ಬೇಡಿಕೆಯ ಸಂಗೀತ ನಿರ್ದೇಶಕರಲ್ಲಿ ಒಬ್ಬರನ್ನಾಗಿ ಮಾಡಿವೆ. ಆದರೆ ಅವರಿಂದು ದಕ್ಷಿಣದಾಚೆಗೆ ಪಡೆದಿರುವ ಖ್ಯಾತಿಯನ್ನು ಗಳಿಸಲು ಅವರಿಗೆ ಹಲವು ವರ್ಷಗಳ ಕಠಿಣ ಪರಿಶ್ರಮ ಬೇಕಾಯಿತು.
ಎಂಎಂ ಕೀರವಾಣಿ ಅವರು ಹೆಸರಾಂತ ಸಾಹಿತಿ ಕೊಡೂರಿ ಶಿವ ಶಕ್ತಿ ದತ್ತ ಅವರ ಪುತ್ರನಾದರೂ ಸಹ ಅವರಿಗೆ ಸುಲಭವಾಗಿ ಸಾಹಿತ್ಯ ರಂಗಕ್ಕೆ ಕಾಲಿಡಲು ಸಾಧ್ಯವಾಗಲಿಲ್ಲ. ಅವರೊಬ್ಬ ಸ್ವತಂತ್ರ ಸಂಗೀತ ಸಂಯೋಜಕರಾಗಿ ಕಾಲಿರಿಸುವ ಮುನ್ನ ತೆಲುಗು ಸಂಗೀತ ಸಂಯೋಜಕ ಕೆ ಚಕ್ರವರ್ತಿ ಮತ್ತು ಮಲಯಾಳಂನ ಸಂಗೀತ ಸಂಯೋಜಕ ಸಿ ರಾಜಮಣಿ ಅವರು ಕೀರವಾಣಿಗೆ ಸ್ಫೂರ್ತಿಯಾಗಿದ್ದರು. ಬಳಿಕ ಮನಸು ಮಮತಾ ಸಿನಿಮಾಗೆ ಅವರು ನೀಡಿರುವ ಸಂಗೀತ ಮನ್ನಣೆಯನ್ನು ತಂದುಕೊಟ್ಟಿತು. ಅಲ್ಲಿಯವರೆಗೂ ಕೀರವಾಣಿ ಅವರ ಪ್ರತಿಭೆ ಬೆಳಕಿಗೆ ಬಂದಿರಲಿಲ್ಲ.
ಇದನ್ನೂ ಓದಿ:ಪ್ರತಿಷ್ಠಿತ ಪ್ರಶಸ್ತಿ ಪಡೆಯಲು ಕ್ಷಣಗಣನೆ: ಆಸ್ಕರ್ ವೇದಿಕೆ ಏರಲಿದ್ದಾರೆ ಭಾರತೀಯರು