ಟಾಲಿವುಡ್ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು 'ಬಾಹುಬಲಿ' ಮತ್ತು 'ಆರ್ಆರ್ಆರ್'ನಂತಹ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲೂ 'ಆರ್ಆರ್ಆರ್' ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಪಡೆಯುವ ಮೂಲಕ ಕೇವಲ ಟಾಲಿವುಡ್ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗಕ್ಕೆ ಗೌರವ ತಂದುಕೊಟ್ಟಿದೆ. ಪ್ರತಿಷ್ಠಿತ ಪ್ರಶಸ್ತಿಯನ್ನು ಗಳಿಸಿದ್ದಕ್ಕಾಗಿ ಸಮಾಜದ ಎಲ್ಲಾ ವರ್ಗದ ಜನರು ಅವರನ್ನು ಶ್ಲಾಘಿಸಿದ್ದಾರೆ.
ಇತ್ತೀಚೆಗೆ ಪ್ರಮುಖ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಮತ್ತು ಎಸ್.ಎಸ್.ರಾಜಮೌಳಿ ನಡುವಿನ ಸಂಭಾಷಣೆ ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗಿದೆ. ಮಹೀಂದ್ರಾ ಸಂಸ್ಥೆಯ ಚೇರ್ಮನ್ ಆಗಿರುವ ಆನಂದ್ ಮಹೀಂದ್ರಾ ಅವರು ಟ್ವಿಟರ್ನಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ಹೊಸ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಾ ಗಮನ ಸೆಳೆಯುತ್ತಿರುತ್ತಾರೆ. ಅವರು ಚಲನಚಿತ್ರ ಪ್ರೇಮಿಯೂ ಆಗಿರುವುದರಿಂದ ಈ ಬಾರಿ ಸಿಂಧೂ ಕಣಿವೆ ನಾಗರೀಕತೆಯ ಕುರಿತು ಸಿನಿಮಾ ಮಾಡುವಂತೆ ರಾಜಮೌಳಿ ಅವರಲ್ಲಿ ವಿನಂತಿ ಮಾಡಿದ್ದಾರೆ. ಇದಕ್ಕೆ ರಾಜಮೌಳಿಯೂ ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಸಿಂಧೂ ಕಣಿವೆ ನಾಗರೀಕತೆ ಸಂಬಂಧಿಸಿದ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ಆನಂದ್ ಮಹೀಂದ್ರಾ ಅವರು, "ಇವು ಇತಿಹಾಸವನ್ನು ಜೀವಂತಗೊಳಿಸುವ ಮತ್ತು ನಮ್ಮ ಕಲ್ಪನೆಗಳನ್ನು ಪ್ರಚೋದಿಸುವ ಅದ್ಭುತ ಚಿತ್ರಗಳಾಗಿವೆ. ಈ ಪುರಾತನ ನಾಗರೀಕತೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕಿದೆ. ಇಂತಹ ಸಮಯದಲ್ಲಿ ಜಗತ್ತಿಗೆ ಸಿಂಧು ನಾಗರೀಕತೆಯ ಕುರಿತಾದ ಸಿನಿಮಾವನ್ನು ನೀವು ಮಾಡಬಹುದೇ" ಎಂದು ಬರೆದು ರಾಜಮೌಳಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.