ಕನ್ನಡ ಚಿತ್ರರಂಗಕ್ಕೆ ಆರಡಿ ಎತ್ತರದ ಹೊಸ ನಟನ ಪಾದಾರ್ಪಣೆ ಆಗಿದೆ. ಖ್ಯಾತ ಬರಹಗಾರ, ಪತ್ರಿಕೋದ್ಯಮಿ ದಿ. ಪಿ. ಲಂಕೇಶ್ ಕುಟುಂಬದ ಮೂರನೇ ಕುಡಿ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಸಿನಿಮಾರಂಗಕ್ಕೆ ಅದ್ಧೂರಿ ಎಂಟ್ರಿ ಕೊಟ್ಟಿದ್ದಾರೆ. ಸಮರ್ಜಿತ್ ಮೊದಲ ಸಿನಿಮಾಗೆ 'ಗೌರಿ' ಎಂಬ ಶೀರ್ಷಿಕೆ ಇಡಲಾಗಿದೆ.
ಗೌರಿ ಸಿನಿಮಾ ಮುಹೂರ್ತ ಸಮಾರಂಭ: ಬೆಂಗಳೂರಿನ ಬುಲ್ ಟೆಂಪಲ್ ರಸ್ತೆಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ಪೂಜೆ ಮೂಲಕ ಗೌರಿ ಸಿನಿಮಾಗೆ ಚಾಲನೆ ಸಿಕ್ಕಿದೆ. ಮುಹೂರ್ತ ಸಮಾರಂಭಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಅವರು ಭೇಟಿ ಕೊಟ್ಟು ಉದಯೋನ್ಮುಖ ನಟ ಸಮರ್ಜಿತ್ ಅವರಿಗೆ ಆಶೀರ್ವದಿಸಿದರು.
ನಿರ್ಮಾಪಕಿ ನಟನಾಗಿ ತಾಯಿ ಮಗ: 'ಗೌರಿ' ಚಿತ್ರಕ್ಕೆ ಇಂದ್ರಜಿತ್ ಲಂಕೇಶ್ ಅವರೇ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮಗನ ಚೊಚ್ಚಲ ಸಿನಿಮಾಗೆ ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಈ ಮೂಲಕ ಇಂದ್ರಜಿತ್ ಲಂಕೇಶ್ ಪತ್ನಿ ಅರ್ಪಿತಾ ಅವರು ನಿರ್ಮಾಪಕಿಯಾಗಿ ಮಗನ ಜೊತೆಗೆ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕ ತಮ್ಮ ಮಗನನ್ನು ತಾವೇ ಬಣ್ಣದ ಲೋಕಕ್ಕೆ ಪರಿಚಯಿಸುತ್ತಿದ್ದಾರೆ ಇಂದ್ರಜಿತ್ ದಂಪತಿ.
ಸಮರ್ಜಿತ್ಗೆ ಜೋಡಿಯಾದ ಸಾನ್ಯಾ ಐಯ್ಯರ್: ಗೌರಿ ಸಿನಿಮಾಗಾಗಿ ಸಮರ್ಜಿತ್ ಸಿಕ್ಕಾಪಟ್ಟೆ ತಯಾರಿ ಮಾಡಿಕೊಂಡಿದ್ದಾರೆ. ಆ್ಯಕ್ಟಿಂಗ್, ಸ್ಟಂಟ್ ಕಲಿತು ಎಲ್ಲಾ ರೀತಿಯ ತಯಾರಿ ಮಾಡಿಕೊಂಡೇ ಕ್ಯಾಮರಾ ಎದುರಿಸುತ್ತಿದ್ದಾರೆ. ಸಮರ್ಜಿತ್ ಮೊದಲ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಕಿರುತೆರೆ ಹಾಗೂ ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಐಯ್ಯರ್. ಅಂದಹಾಗೆ ಸಾನ್ಯಾ ಅವರಿಗೂ ಇದು ಮೊದಲ ಸಿನಿಮಾ. ಚೊಚ್ಚಲ ಸಿನಿಮಾ ಮೂಲಕ ಸಮರ್ಜಿತ್ ಮತ್ತು ಸಾನ್ಯಾ ಇಬ್ಬರೂ ದೊಡ್ಡ ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.