ಕಾರ್ಪೊರೇಟ್ ಇನ್ವೆಸ್ಟಿಗೇಶನ್ ರಿಸ್ಕ್ ಕನ್ಸಲ್ಟಿಂಗ್ ಕ್ರೋಲ್ನ 'ಸೆಲೆಬ್ರಿಟಿ ಬ್ರ್ಯಾಂಡ್ ವ್ಯಾಲ್ಯೂಯೇಶನ್' ವರದಿ ಪ್ರಕಾರ, ಬಾಲಿವುಡ್ ನಟ ರಣ್ವೀರ್ ಸಿಂಗ್ ಹೆಚ್ಚು ಮೌಲ್ಯಯುತ ಅಥವಾ ಶ್ರೀಮಂತ ಸೆಲೆಬ್ರಿಟಿಯಾಗಿದ್ದಾರೆ. 'ಬಿಯಾಂಡ್ ದಿ ಮೈನ್ಸ್ಟ್ರೀಮ್' ಎಂಬ ಅಧ್ಯಯನದ ಎಂಟನೇ ಆವೃತ್ತಿಯ ಪ್ರಕಾರ, ನಟ ರಣ್ವೀರ್ ಸಿಂಗ್ ಭಾರತೀಯ ಶ್ರೇಷ್ಠ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ '2022ನೇ ಸಾಲಿನ ಅತ್ಯಂತ ಮೌಲ್ಯಯುತ ಭಾರತೀಯ ಸೆಲೆಬ್ರಿಟಿ' ಎನಿಸಿಕೊಂಡಿದ್ದಾರೆ. ಸತತ ಐದು ವರ್ಷಗಳಿಂದ ಈ ಪಟ್ಟಿಯಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದರು.
2022ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಮೈದಾನದಲ್ಲಿನ ಪ್ರಶ್ನಾರ್ಹ ಪ್ರದರ್ಶನವು ಅವರ ಬ್ರ್ಯಾಂಡ್ ಮೌಲ್ಯವನ್ನು ಹಾನಿಗೊಳಿಸಿದೆ ಎಂದು ತೋರುತ್ತದೆ. ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರ ಸಂಪೂರ್ಣ ಬ್ರ್ಯಾಂಡ್ ಮೌಲ್ಯವು 2020ರಲ್ಲಿ 1,965 ಕೋಟಿ ರೂ. ($ 237.7 ಮಿಲಿಯನ್), 2021ರಲ್ಲಿ 1,535 ಕೋಟಿ ರೂ. ($ 185.7 ಮಿಲಿಯನ್) ಇತ್ತು. ಅಗ್ರಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಅವರ ಐದು ವರ್ಷಗಳ ಆಳ್ವಿಕೆಯು ಅಂತ್ಯಗೊಂಡಿದೆ. ಅದರ ಕ್ರೆಡಿಟ್ ಸಿಂಬಾ ಸ್ಟಾರ್ ರಣ್ವೀರ್ ಸಿಂಗ್ ಅವರಿಗೆ ಸಲ್ಲುತ್ತದೆ.
$ 181.7 ಮಿಲಿಯನ್ ಬ್ರ್ಯಾಂಡ್ ಮೌಲ್ಯದೊಂದಿಗೆ ನಟ ರಣ್ವೀರ್ ಸಿಂಗ್ ಅವರು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ. ಟೀಂ ಇಂಡಿಯಾ ಕ್ರಿಕೆಟ್ ನಾಯಕ ಸ್ಥಾನದಿಂದ ಹೊರಬಮದ ಬಳಿಕ ವಿರಾಟ್ ಕೊಹ್ಲಿ ಅವರ ಬ್ರ್ಯಾಂಡ್ ಮೌಲ್ಯ ಕಡಿಮೆ ಆಗಿದೆ. ಸದ್ಯ ವಿರಾಟ್ ಕೊಹ್ಲಿ ಅವರು 176.9 ಮಿಲಿಯನ್ ಡಾಲರ್ ಬ್ರ್ಯಾಂಡ್ ಮೌಲ್ಯದೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನೂ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ($153.6 ಮಿಲಿಯನ್) ಮತ್ತು ಆರ್ಆರ್ಆರ್ ಖ್ಯಾತಿಯ ನಟಿ ಆಲಿಯಾ ಭಟ್ ($102.9 ಮಿಲಿಯನ್) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಹಿಂದೆ ಏಳನೇ ಸ್ಥಾನದಲ್ಲಿದ್ದ ನಟಿ ದೀಪಿಕಾ ಪಡುಕೋಣೆ $ 82.9 ಮಿಲಿಯನ್ ಬ್ರ್ಯಾಂಡ್ ಮೂಲಕ ಐದನೇ ಸ್ಥಾನ ತಲುಪಿದ್ದಾರೆ.