ಬ್ಲ್ಯಾಕ್ ಟೈಗರ್ ಎಂದೇ ಕರೆಯಲ್ಪಟ್ಟಿದ್ದ ಭಾರತೀಯ ಗೂಢಚಾರಿ ರವೀಂದ್ರ ಕೌಶಿಕ್ ಅವರ ಬಯೋಪಿಕ್ ನಿರ್ಮಾಣವಾಗಲಿದೆ. ಚಲನಚಿತ್ರ ನಿರ್ದೇಶಕ ಅನುರಾಗ್ ಬಸು ರವೀಂದ್ರ ಕೌಶಿಕ್ ಬಯೋಪಿಕ್ ಬಗ್ಗೆ ಇಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಲೈಫ್ ಇನ್ ಎ ಮೆಟ್ರೋ, ಗ್ಯಾಂಗ್‌ಸ್ಟರ್, ಬರ್ಫಿ ಮತ್ತು ಲುಡೋ ಚಿತ್ರಗಳಿಗೆ ಹೆಸರುವಾಸಿಯಾಗಿರುವ ನಿರ್ದೇಶಕ ಅನುರಾಗ್ ಬಸು ಅವರು ರವೀಂದ್ರ ಕೌಶಿಕ್ ಅಂಥವರ ಕಥೆಗಳನ್ನು ಜನರೊಂದಿಗೆ ಹಂಚಿಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಬಯೋಪಿಕ್‌ಗೆ ಬ್ಲ್ಯಾಕ್ ಟೈಗರ್ ಎಂದು ಟೈಟಲ್ ಫಿಕ್ಸ್ ಆಗಿದೆ.
ರವೀಂದ್ರ ಕೌಶಿಕ್ ಅವರ ಕಥೆ ಧೈರ್ಯ ಮತ್ತು ಶೌರ್ಯಕ್ಕೆ ಸಂಬಂಧಪಟ್ಟಿದ್ದು. ತಮ್ಮ 20ನೇ ಕಿರಿ ವಯಸ್ಸಿನಲ್ಲಿ ಅವರು 70 ಮತ್ತು 80ರ ದಶಕಗಳಲ್ಲಿ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಭದ್ರತಾ ವಿಷಯಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ನಮ್ಮ ಅನೇಕ ಇತಿಹಾಸ ಮರೆಯಾಗಿದೆ. ಇಂತಹ ನಾಯಕರನ್ನು ನಾವು ಗುರುತಿಸಬೇಕು ಮತ್ತು ಅವರಿಂದ ಕಲಿಯಬೇಕು ಎಂದು ನಿರ್ದೇಶಕ ಅನುರಾಗ್ ಬಸು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯ ಪ್ರಕಾರ, ಗೂಢಚಾರಿ ರವೀಂದ್ರ ಕೌಶಿಕ್ ಅವರು ಮೊದಲ ಬಾರಿ ಭಾರತದ ವಿದೇಶಿ ಗುಪ್ತಚರ ಸಂಸ್ಥೆಯಾದ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW)ಗೆ ರಹಸ್ಯವಾಗಿ ಹೋದಾಗ ಅವರಿಗೆ ಕೇವಲ 20 ವರ್ಷ. ಪಾಕಿಸ್ತಾನಿ ಸೇನೆಯ ಅತ್ಯುನ್ನತ ಶ್ರೇಣಿಯನ್ನು ಭೇದಿಸುವಲ್ಲಿ ಅವರು ಯಶಸ್ವಿ ಆಗಿದ್ದು, ಈ ಹಿನ್ನೆಲೆ ಅವರನ್ನು ಇಲ್ಲಿಯವರೆಗೆ ಭಾರತದ ಅತ್ಯುತ್ತಮ ಗೂಢಚಾರಿ ಎಂದು ಪರಿಗಣಿಸಲಾಗಿದೆ.
ತಮ್ಮ ಶೌರ್ಯದ ಹಿನ್ನೆಲೆ, ಅಂದು ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರಿಂದ 'ದಿ ಬ್ಲ್ಯಾಕ್ ಟೈಗರ್' ಎಂಬ ಹೆಸರನ್ನು ಪಡೆದರು. ರವೀಂದ್ರ ಕೌಶಿಕ್ ಅವರ ಕುಟುಂಬಸ್ಥರು ಈ ಬಯೋಪಿಕ್‌ಗೆ ಒಪ್ಪಿಗೆ ನೀಡಿದ್ದಾರೆ. ಅವರ ಬಗ್ಗೆ ಮಾಹಿತಿಯನ್ನೂ ಹಂಚಿಕೊಳ್ಳುವ ಮೂಲಕ ನಮಗೆ ಬೆಂಬಲ ನೀಡುತ್ತಿದ್ದಾರೆ ಎಂದು ಅನುರಾಗ್ ಬಸು ತಿಳಿಸಿದ್ದಾರೆ.