ಇಂಟರ್ನ್ಯಾಷನಲ್ ಪಬ್ಲಿಕೇಶನ್ ''ವೆರೈಟಿ'' ಗುರುವಾರದಂದು ಸಿನಿಮಾ ಕ್ಷೇತ್ರದ 500 ಪ್ರಭಾವಿ ವ್ಯಕ್ತಿಗಳ (influential individuals) ಪಟ್ಟಿಯನ್ನು ಅನಾವರಣಗೊಳಿಸಿದೆ. ಈ ಪ್ರತಿಷ್ಟಿತ ಪಟ್ಟಿಯು ಭಾರತದ 10 ಖ್ಯಾತನಾಮರನ್ನು ಒಳಗೊಂಡಿದ. ಶಾರುಖ್ ಖಾನ್, ಜೂನಿಯರ್ ಎನ್‌ಟಿಆರ್, ಆದಿತ್ಯ ಚೋಪ್ರಾ, ಎಸ್‌ಎಸ್ ರಾಜಮೌಳಿ, ಏಕ್ತಾ ಕಪೂರ್, ಸಿದ್ಧಾರ್ಥ್ ರಾಯ್, ಭೂಷಣ್ ಕುಮಾರ್ ಈ ಲಿಸ್ಟ್ನಲ್ಲಿದ್ದಾರೆ.
ವೈಯಾಕಾಮ್ 18 ಹೊಂದಿರುವ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ, ರೆಡ್ ಸೀ ಫಿಲ್ಮ್ ಫೆಸ್ಟಿವಲ್ ಸಂಸ್ಥಾಪಕರಾದ ಶಿವಾನಿ ಪಾಂಡ್ಯ ಮಲ್ಹೋತ್ರಾ ಮತ್ತು ಸೋನಿ ಪಿಕ್ಚರ್ಸ್ ಸಿಇಒ ಎನ್.ಪಿ ಸಿಂಗ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಈ ಖ್ಯಾತನಾಮರನ್ನು ವೆರೈಟಿ ಸಂಪಾದಕೀಯ ಮಂಡಳಿ ಆಯ್ಕೆ ಮಾಡಿದೆ. ಈ ಲಿಸ್ಟ್ ಬಿಡುಗಡೆಗೊಳ್ಳುವ ಮುನ್ನ ಸಂಪೂರ್ಣ ಸಂಶೋಧನೆ ನಡೆಸಿದೆ.
ಪಠಾಣ್ ಮತ್ತು ಜವಾನ್ ಎಂಬೆರಡು ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿರುವ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರನ್ನು ''ವೆರೈಟಿ''ಯು "ಆಧುನಿಕ ಯುಗದ ಗ್ರೇಟ್ ರೊಮ್ಯಾಂಟಿಕ್ ಸ್ಟಾರ್" ಎಂದು ವರ್ಣಿಸಿದೆ. ಅಲ್ಲದೇ, ಕ್ರಿಸ್ಮಸ್ ಸಂದರ್ಭ ಸದ್ದು ಮಾಡುತ್ತಿರುವ ಡಂಕಿ ಮತ್ತು ಮುಂದಿನ ವರ್ಷ ಪ್ರಾರಂಭವಾಗಲಿರುವ ಬಹುನಿರೀಕ್ಷಿತ ಬಾಲಿವುಡ್ ಸ್ಪೈ ಯೂನಿವರ್ಸ್ ಸಿನಿಮಾ ಟೈಗರ್ ವರ್ಸಸ್ ಪಠಾಣ್ ಸೇರಿದಂತೆ ಅವರ ಮುಂಬರುವ ಯೋಜನೆಗಳನ್ನು ವೆರೈಟಿ ಸಂಪಾದಕೀಯ ಮಂಡಳಿ ಪ್ರಸ್ತಾಪಿಸಿದೆ.
ಆರ್‌ಆರ್‌ಆರ್ ಖ್ಯಾತಿಯ ಜೂನಿಯರ್ ಎನ್‌ಟಿಆರ್ ಜಾಗತಿಕ ಪ್ರೇಕ್ಷಕರನ್ನು ಆಕರ್ಷಿಸುವ ತಮ್ಮ ಅಸಾಧಾರಣ ಸಾಮರ್ಥ್ಯದಿಂದಾಗಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆರ್‌ಆರ್‌ಆರ್, ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್‌ಎಸ್ ರಾಜಮೌಳಿ ಭಾರತದ ಅತ್ಯಂತ ಯಶಸ್ವಿ ಚಲನಚಿತ್ರ ನಿರ್ದೇಶಕ (commercially successful filmmaker) ಎಂದು ಗುರುತಿಸಲ್ಪಟ್ಟಿದ್ದಾರೆ.