ಭಾರತೀಯ ಚಿತ್ರರಂಗದ ಸ್ಟಾರ್ ನಟರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾರೆ. ಕೆಲವೊಮ್ಮೆ ಅವರು ನಿರ್ದೇಶನವನ್ನೂ ಮಾಡುತ್ತಾರೆ. ನಟನೆಯ ಜೊತೆಗೆ ಆಕ್ಷನ್ ಕಟ್ ಹೇಳಿ ಸಕ್ಸಸ್ ಕಂಡ ಅನೇಕ ನಟರು ಇದ್ದಾರೆ. ದಕ್ಷಿಣದಿಂದ ಉತ್ತರದವರೆಗೂ ಉತ್ತಮ ಬರಹಗಾರರು ಮತ್ತು ನಿರ್ದೇಶಕರಾದ ತಾರೆಯರಿದ್ದಾರೆ. ಆದರೆ, ಇವರೆಲ್ಲ ಕೆಲವು ಸಮಯದವರೆಗೆ ನಿರ್ದೇಶನವನ್ನು ಮರೆತು ಕೇವಲ ನಟನೆಯಲ್ಲೇ ತೊಡಗಿಸಿಕೊಂಡಿದ್ದರು. ಇದೀಗ ಲಾಂಗ್ಗ್ಯಾಪ್ನ ನಂತರ ಮತ್ತೊಮ್ಮೆ ನಿರ್ದೇಶನದ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ.
ಆಕ್ಷನ್ ಕಟ್ ಹೇಳಲು ಧನುಷ್ ಸಿದ್ಧ:ಕಾಲಿವುಡ್ ಸೂಪರ್ಸ್ಟಾರ್ ಧನುಷ್ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ತಮ್ಮ 50ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಪಾ.ಪಾಂಡಿ (2017) ಚಿತ್ರದ ಮೂಲಕ ಧನುಷ್ ನಿರ್ದೇಶಕನಾಗಿ ಪದಾರ್ಪಣೆ ಮಾಡಿದರು. ಇದೀಗ ಸುಮಾರು 6 ವರ್ಷಗಳ ಬಳಿಕ ಮತ್ತೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಉತ್ತರ ಚೆನ್ನೈ ಹಿನ್ನೆಲೆಯಲ್ಲಿ ಈ ಸಿನಿಮಾ ಆ್ಯಕ್ಷನ್ ಡ್ರಾಮಾ ಆಗಲಿದೆ ಅನ್ನೋದು ಚಿತ್ರತಂಡದ ಮಾತು.
ಧನುಷ್ ಅವರ ಸ್ವ-ನಿರ್ದೇಶನದ ಚಿತ್ರ ಸದ್ಯ ಶೂಟಿಂಗ್ ಹಂತದಲ್ಲಿದೆ. ಈ ಸಿನಿಮಾವನ್ನು ಸನ್ ಪಿಕ್ಷರ್ಸ್ ನಿರ್ಮಿಸುತ್ತಿದ್ದು, 2024 ರಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಯುವ ನಟ ಸಂದೀಪ್ ಕಿಶನ್, ಅನಿಖಾ ಸುರೇಂದ್ರನ್, ಎಸ್ಜೆ ಸೂರ್ಯ, ವಿಷ್ಣು ವಿಶಾಲ್, ವರಲಕ್ಷ್ಮಿ ಶರತ್ಕುಮಾರ್ ಮುಂತಾದ ತಾರೆಯರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ನಿರ್ದೇಶಕನ ಕ್ಯಾಪ್ ತೊಟ್ಟ ಉಪೇಂದ್ರ: ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ತೆಲುಗಿನಲ್ಲಿ ಭಾರಿ ಕ್ರೇಜ್ ಇದೆ. ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದಾರೆ. 'ಶ್..! (1993', 'ಓಂ (1995', 'ಉಪೇಂದ್ರ (1999)' ಚಿತ್ರಗಳನ್ನು ಇವರೇ ನಿರ್ದೇಶಿಸಿದ್ದಾರೆ. ಜೊತೆಗೆ ಈ ಮೂರು ಸಿನಿಮಾಗಳಲ್ಲಿ ಅವರೇ ನಟಿಸಿದ್ದಾರೆ. ಅಲ್ಲದೇ ಕನ್ನಡದಲ್ಲಿ ಸೂಪರ್ ಹಿಟ್ ಆಗಿರುವ ಈ ಸಿನಿಮಾಗಳು ತೆಲುಗಿಗೆ ಡಬ್ ಆಗಿ, ಅಲ್ಲಿನ ಪ್ರೇಕ್ಷಕರ ಮನಗೆದ್ದಿವೆ.
ಆದರೆ, 2015ರಲ್ಲಿ ಬಿಡುಗಡೆಯಾದ ಇವರ ನಿರ್ದೇಶನದಲ್ಲೇ ಮೂಡಿಬಂದ 'ಉಪ್ಪಿ 2' ಚಿತ್ರದ ನಂತರ ನಿರ್ದೇಶನಕ್ಕೆ ಕೊಂಚ ಬ್ರೇಕ್ ಕೊಟ್ಟರು. ಇದೀಗ ಮತ್ತೆ ಎಂಟು ವರ್ಷಗಳ ನಂತರ ಮತ್ತೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಟೈಟಲ್ನಿಂದಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ UI (ಯುಐ) ಸಿನಿಮಾಗೆ ಇವರೇ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಶೂಟಿಂಗ್ ಕೂಡ ಸೈಲೆಂಟ್ ಆಗಿಯೇ ಮುಕ್ತಾಯಗೊಂಡಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.