'ಹಿಂದಿ ಭಾಷೆಯ ಹೇರಿಕೆ'ಯ ಕುರಿತು ದಕ್ಷಿಣ ಭಾರತದ ರಾಜ್ಯಗಳಲ್ಲಿ ಆಗಾಗ್ಗೆ ಆಕ್ರೋಶ ವ್ಯಕ್ತವಾಗುತ್ತಿರುತ್ತದೆ. ಇದೀಗ ಸ್ಯಾಂಡಲ್ವುಡ್ ನಟಿ ರಮ್ಯಾ ಅವರು ಕೂಡ ಸಾಂದರ್ಭಿಕವಾಗಿ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ತೆಲುಗಿನ ಆರ್ಆರ್ಆರ್ ಸಿನಿಮಾ ಮತ್ತು ದ ಎಲಿಫೆಂಟ್ ವಿಸ್ಪರರ್ಸ್ ಕಿರು ಸಾಕ್ಷ್ಯಚಿತ್ರ ಆಸ್ಕರ್ ಅವಾರ್ಡ್ ಗೆದ್ದ ದಿನದಂದು ಟ್ವೀಟ್ ಮಾಡಿರುವ ನಟಿ, "ಭಾರತ ಅಂದರೆ ಕೇವಲ ಹಿಂದಿಯಲ್ಲ, ಬಾಲಿವುಡ್ ಮಾತ್ರವಲ್ಲ" ಎಂದಿದ್ದಾರೆ. ಜೊತೆಗೆ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಆಟೋ ಚಾಲಕ ಮತ್ತು ಹಿಂದಿ ಮಾತನಾಡುವ ಯುವತಿಯ ವಿಡಿಯೋವೊಂದನ್ನು ಸಹ ಟ್ವೀಟ್‌ನೊಂದಿಗೆ ಲಗತ್ತಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ರಮ್ಯಾ, ಪ್ರಸಕ್ತ ವಿದ್ಯಮಾನಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ಇದೀಗ ಹಿಂದಿ ಹೇರಿಕೆಯ ವಿರುದ್ಧ ಅಭಿಪ್ರಾಯ ಹಂಚಿಕೊಂಡಿದ್ದು, ರಮ್ಯಾ ಟ್ವೀಟ್ಗೆ ನೆಟ್ಟಿಗರಿಂದ ಬೆಂಬಲ ವ್ಯಕ್ತವಾಗಿದೆ.
ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಾಟು ನಾಟು ಹಾಡನ್ನು ತೆಲುಗಿನಲ್ಲಿ ಪ್ರದರ್ಶನ ಮಾಡಿರುವುದು ನನಗೆ ಖುಷಿಯಾಯಿತು ಎಂದು ‘RRR’ ಚಿತ್ರತಂಡಕ್ಕೆ ಅಭಿನಂದಿಸಿದ ರಮ್ಯಾ, "ಭಾರತವು ಹಲವು ಭಾಷೆ, ಸಂಸ್ಕೃತಿಯುಳ್ಳ ವೈವಿಧ್ಯಮಯ ದೇಶ ಎಂದು ಇಡೀ ವಿಶ್ವವೇ ಅರ್ಥ ಮಾಡಿಕೊಳ್ಳುವ ಸಮಯ ಬಂದಿದೆ. ಭಾರತ ಎಂದರೆ ಕೇವಲ ಹಿಂದಿ ಭಾಷೆಯಲ್ಲ. ಭಾರತ ಅಂದರೆ ಕೇವಲ ಬಾಲಿವುಡ್ ಮಾತ್ರವಲ್ಲ. ಈ ರೀತಿಯ ರೂಢಿಗತ ಚಿಂತನೆ ಸರಿಯಲ್ಲ" ಎಂದು ಹೇಳಿದ್ದಾರೆ. ಇದರ ಜೊತೆಗೆ, ಬೆಂಗಳೂರಿನ ಇತ್ತೀಚೆಗೆ ಆಟೋ ಚಾಲಕನೊಬ್ಬ ಹಿಂದಿ ಮಾತನಾಡುವಂತೆ ಒತ್ತಾಯಿಸಿದ ಯುವತಿಯೊಂದಿಗೆ ಕನ್ನಡಾಭಿಮಾನ ಮೆರೆದ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಇದನ್ನೂ ಓದಿ:RRR ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಗರಿ!