ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ವಿಷ್ಣುವರ್ಧನ್ ಸ್ಮಾರಕವನ್ನು ಡಿಸೆಂಬರ್ ಒಳಗೆ ಉದ್ಘಾಟಿಸಲಾಗುವುದು ಎಂದು ತಿಳಿಸಿದ್ದಾರೆ.
ಹಿಂದೆ ವಿಷ್ಣುವರ್ಧನ್ ಅವರಿದ್ದ ಜಯನಗರದ ಮನೆಯ ಸ್ಥಳದಲ್ಲಿಯೇ ನೂತನವಾಗಿ ನಿರ್ಮಾಣವಾಗಿರುವ ವಲ್ಮೀಕ ಹೆಸರಿನ ಮನೆಯ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರು ಪಾಲ್ಗೊಂಡರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತಿ ವಿಷ್ಣುವರ್ಧನ್ ಅವರು ಖುದ್ದಾಗಿ ಬಂದು ಗೃಹಪ್ರವೇಶಕ್ಕೆ ಆಹ್ವಾನ ನೀಡಿದ್ದರು. ವಿಷ್ಣುವರ್ಧನ್ ಅವರಿದ್ದ ಮನೆಯನ್ನು ಇನ್ನಷ್ಟು ಚೆಂದ ಮಾಡಿದ್ದಾರೆ. ನವೀಕರಣಗೊಂಡಿರುವ ವಿಷ್ಣುವರ್ಧನ್ ಅವರ ಮನೆಯ ಹಿಂದೆ ಭಾರತಿ ವಿಷ್ಣುವರ್ಧನ್ ಅವರ ಪ್ರಯತ್ನ ಹಾಗೂ ಶ್ರಮ ಎದ್ದು ಕಾಣುತ್ತಿದೆ. ವಿಷ್ಣುವರ್ಧನ್ ಅವರ ತ್ಯಾಗವನ್ನು ಅಳವಡಿಸಿದ್ದಾರೆ ಎನ್ನುವುದು ನನ್ನ ಭಾವನೆ. ಅವರಿಗೆ ಶುಭ ಕೋರಲು ಬಂದಿದ್ದೇನೆ ಎಂದರು.
ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದೆ. ಡಿಸೆಂಬರ್ ಒಳಗೆ ಸ್ಮಾರಕದ ಉದ್ಘಾಟನೆಯನ್ನು ಅದ್ಧೂರಿಯಾಗಿ ಮಾಡಲು ತೀರ್ಮಾನಿಸಲಾಗಿದೆ. ಹೆಚ್ಚಿನ ವಿವರಗಳನ್ನು ಅವರ ಕುಟುಂಬದವರೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು. ವಿಷ್ಣುವರ್ಧನ್ ಅವರ ಮೇರು ವ್ಯಕ್ತಿತ್ವ ಹಾಗೂ ಘನತೆಗೆ ತಕ್ಕ ಹಾಗೆ ಕಾರ್ಯಕ್ರಮವನ್ನು ವೈಭವಯುತವಾಗಿ ಆಯೋಜಿಸಲಾಗುವುದು ಎಂದು ಸಿಎಂ ಹೇಳಿದರು.