ಉತ್ತರ ಕರ್ನಾಟಕದ ಪ್ರತಿಭೆಗಳು ನಟರಾಗಿ, ನಿರ್ದೇಶಕರು ಹಾಗೂ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಈ ಸಾಲಿಗೀಗ ರಂಜನ್ ಛತ್ರಪತಿ ಹೊಸ ಸೇರ್ಪಡೆ. ಇನಾಮ್ದಾರ್ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿ ರಿಲೀಸ್ಗೆ ರೆಡಿಯಾಗುತ್ತಿರುವ ಇನಾಮ್ದಾರ್ ಚಿತ್ರದ ಆಫೀಶಿಯಲ್ ಟ್ರೇಲರ್ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ಸಂದೇಶ್ ಶೆಟ್ಟಿ ನಿರ್ದೇಶನದ 'ಇನಾಮ್ದಾರ್' ಚಿತ್ರದ ಟ್ರೇಲರ್ ಅನ್ನು ನಿರಂಜನ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಉದ್ಯಮಿ ಕರುಣಾಕರ್ ರೆಡ್ಡಿ, ಎಂ.ಕೆ ಮಠ ಸೇರಿದಂತೆ ಮೊದಲಾದ ಗಣ್ಯರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ನಿರ್ದೇಶಕ ಸಂದೇಶ್ ಶೆಟ್ಟಿ ಮಾತನಾಡಿ, ಇದು ಶಿವಾಜಿ ಮಹಾರಾಜರನ್ನು ಆರಾಧಿಸುವ ಉತ್ತರ ಕರ್ನಾಟಕ ಮೂಲದ "ಇನಾಮ್ದಾರ್" ಕುಟುಂಬ ಮತ್ತು ದಕ್ಷಿಣದ ಕರಾವಳಿ ಭಾಗದ ಕಾಡಿನಲ್ಲಿ ವಾಸಿಸುವ ಹಾಗೂ ಶಿವನ ಆರಾಧಕರಾದ ಕಾಡು ಜನರ ನಡುವೆ ನಡೆಯುವ ವರ್ಣಸಂಘರ್ಷದ ಕಥೆ. ಚಿತ್ರಕ್ಕೆ 'ಕಪ್ಪು ಸುಂದರಿಯ ಸುತ್ತ' ಎಂಬ ಅಡಿಬರಹವಿದೆ. ಬೆಳಗಾವಿ, ಕುಂದಾಪುರ, ಚಾಮರಾಜನಗರ ಸೇರಿದಂತೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಹಾಗೂ ಹಾಡುಗಳು ಜನರ ಮನ ಗೆದ್ದಿವೆ.
ಇನಾಮ್ದಾರ್ ಚಿತ್ರದ ನಾಯಕ ರಂಜನ್ ಛತ್ರಪತಿ ಮಾತನಾಡಿ, ನಮ್ಮ ಚಿತ್ರ ಆರಂಭವಾದಾಗ ಬೇರೆ ನಿರ್ಮಾಪಕರಿದ್ದರು. ಕಾರಣಾಂತರಗಳಿಂದ ಅವರು ಈ ಚಿತ್ರದಿಂದ ದೂರ ಸರಿದರು. ಆಗ ನಿರಂಜನ್ ಶೆಟ್ಟಿ ತಲ್ಲೂರು ಅವರು ಮುಂದೆ ಬಂದು ಈ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ನಾನು ಈ ಚಿತ್ರದಲ್ಲಿ "ಇನಾಮ್ದಾರ್" ಕುಟುಂಬದ ಮಗನಾಗಿ ಕಾಣಿಸಿಕೊಂಡಿದ್ದೇನೆ. ಈ ಸಿನಿಮಾ ನಿಜಕ್ಕೂ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.