ನವದೆಹಲಿ: ಬಹುಕೋಟಿ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಜೊತೆಗಿನ ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮೇ 25 ರಿಂದ ಜೂನ್ 12 ರವರೆಗೆ ವಿದೇಶಕ್ಕೆ ತೆರಳಲು ದೆಹಲಿ ನ್ಯಾಯಾಲಯ ಮಂಗಳವಾರ ಅನುಮತಿ ನೀಡಿತು. ಜಾಕ್ವೆಲಿನ್ ಅವರು ಐಐಎಫ್ಎ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ಮೇ 25 ರಿಂದ ಮೇ 27 ರವರೆಗೆ ಅಬುಧಾಬಿಗೆ ಪ್ರಯಾಣಿಸಬೇಕೆಂದು ಹಾಗೂ ಚಲನಚಿತ್ರ ಚಿತ್ರೀಕರಣಕ್ಕಾಗಿ ಮೇ 28 ರಿಂದ ಜೂನ್ 12 ರವರೆಗೆ ಮಿಲನ್‌ಗೆ ಪ್ರಯಾಣಿಸಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಪಟಿಯಾಲ ಹೌಸ್ ಕೋರ್ಟ್‌ನ ವಿಶೇಷ ನ್ಯಾಯಾಧೀಶ ಶೈಲೇಂದ್ರ ಮಲಿಕ್ ಅವರು ವಿಚಾರಣೆ ನಡೆಸಿ ಒಪ್ಪಿಗೆ ನೀಡಿದರು.
ನವೆಂಬರ್ 15 ರಂದು ನ್ಯಾಯಾಲಯ ಜಾಕ್ವೆಲಿನ್‌ಗೆ ಬಂಧನ ಪೂರ್ವ ಜಾಮೀನು ನೀಡಿತ್ತು. ಜಾರಿ ನಿರ್ದೇಶನಾಲಯ (ಇಡಿ) ಇತ್ತೀಚೆಗೆ ಜಾಕ್ವೆಲಿನ್ ಅವರನ್ನು ಆರೋಪಿ ಎಂದು ಹೆಸರಿಸಿ 2ನೇ ಪೂರಕ ಚಾರ್ಜ್ ಶೀಟ್ ಸಲ್ಲಿಸಿತ್ತು. ಸೆಪ್ಟೆಂಬರ್ 26ರಂದು ನ್ಯಾಯಾಲಯ ಆಕೆಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತ್ತು. ಪ್ರಕರಣದಲ್ಲಿ ಜಾಕ್ವೆಲಿನ್ ಮತ್ತು ಮತ್ತೊಬ್ಬ ಬಾಲಿವುಡ್ ನಟಿ ನೋರಾ ಫತೇಹಿ ಸಾಕ್ಷಿಯಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಜಾಕ್ವೆಲಿನ್‌ಗೆ ಸೇರಿದ 7.2 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮತ್ತು ಸ್ಥಿರ ಠೇವಣಿಗಳನ್ನು ಇಡಿ ಜಪ್ತಿ ಮಾಡಿತ್ತು. ಈ ಉಡುಗೊರೆಗಳು ಮತ್ತು ಆಸ್ತಿ ನಟಿ ಸ್ವೀಕರಿಸಿದ ಅಪರಾಧದ ಆದಾಯ ಎಂದು ಇಡಿ ಹೇಳಿದೆ.
ಫೆಬ್ರವರಿಯಲ್ಲಿ, ಚಂದ್ರಶೇಖರ್ ಅವರನ್ನು ಬಾಲಿವುಡ್ ನಟರಿಗೆ ಪರಿಚಯಿಸಿದ ಆಪಾದಿತ ಸಹಾಯಕಿ ಪಿಂಕಿ ಇರಾನಿ ವಿರುದ್ಧ ಇಡಿ ತನ್ನ ಮೊದಲ ಪೂರಕ ಚಾರ್ಜ್‌ಶೀಟ್ ಸಲ್ಲಿಸಿತ್ತು. ಪಿಂಕಿ ಜಾಕ್ವೆಲಿನ್‌ಗೆ ದುಬಾರಿ ಉಡುಗೊರೆಗಳನ್ನು ಆಯ್ಕೆ ಮಾಡುತ್ತಿದ್ದರು. ಅದಕ್ಕೆ ಚಂದ್ರಶೇಖರ್ ಪಾವತಿ ಮಾಡಿದ ನಂತರ ಅದನ್ನು ಅವರ ನಿವಾಸಕ್ಕೆ ಕಳುಹಿಸುತ್ತಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ. ಡಿಸೆಂಬರ್ 2021 ರಲ್ಲಿ ತನಿಖಾ ಸಂಸ್ಥೆ ಈ ವಿಷಯದಲ್ಲಿ ಮೊದಲ ಚಾರ್ಜ್‌ಶೀಟ್ ಸಲ್ಲಿಸಿತ್ತು.