ಪಂಜಿಮ್ (ಗೋವಾ): ಖ್ಯಾತ ತೆಲುಗು ನಟ, ಮೆಗಾಸ್ಟರ್ ಚಿರಂಜೀವಿ 2022ನೇ ಸಾಲಿನ ಭಾರತೀಯ ಚಲನಚಿತ್ರ ವ್ಯಕ್ತಿತ್ವ ಪ್ರಶಸ್ತಿಗೆ ಭಾಜನರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚಿ ಹೊಗಳಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಿ ಹೊಗಳಿಕೆಯ ಸುರಿಮಳೆಯನ್ನೇ ಹರಿಸಿದ್ದಾರೆ.
ಚಿರಂಜೀವಿ ಓರ್ವ ಶ್ರೇಷ್ಠ ನಟ. ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿದ ಅದ್ಭುತ ನಟ. ಕೋಟ್ಯಂತರ ಜನರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರತಿಷ್ಠಿತ 'ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿತ್ವ' ಪ್ರಶಸ್ತಿಗೆ ಆಯ್ಕೆಯಾಗಿರುವ ಅವರಿಗೆ ನನ್ನ ಅಭಿನಂದನೆಗಳು ಎಂದು ಹೇಳಿದ್ದಾರೆ.
ಗೋವಾದಲ್ಲಿ ಭಾನುವಾರ ನಡೆದ ಐಎಫ್‌ಎಫ್‌ಐನ 53ನೇ ಆವೃತ್ತಿಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಈ ಘೋಷಣೆ ಮಾಡಿದರು.
ನಾಲ್ಕು ದಶಕಗಳ ಕಾಲ ಚಿತ್ರರಂಗದಲ್ಲಿರುವ ಚಿರಂಜೀವಿ ಇದೂವರೆಗೂ ತೆಲುಗಿನಲ್ಲಿ 150ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ. ಜೊತೆಗೆ ಹಿಂದಿ, ತಮಿಳು ಮತ್ತು ಕನ್ನಡದ ಕೆಲವು ಚಲನಚಿತ್ರಗಳಲ್ಲಿ ಕೂಡ ಅವರು ನಟಿಸಿದ್ದಾರೆ. ಚಿರಂಜೀವಿ ತೆಲುಗು ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಪ್ರಭಾವಶಾಲಿ ನಟರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.
1982 ರಲ್ಲಿ 'ಇನಿತ್ಲೋ ರಾಮಯ್ಯ ವೀಡಿಲೋ ಕೃಷ್ಣಯ್ಯ' ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಮೊದಲ ಚಿತ್ರದಲ್ಲೇ ತಮ್ಮ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ತಮ್ಮತ್ತ ಸೆಳೆದುಕೊಂಡರು. ಅವರ ಉತ್ಸಾಹಭರಿತ ನೃತ್ಯ ಮತ್ತು ಶಕ್ತಿಯುತ ಹೋರಾಟದ ದೃಶ್ಯಗಳಿಂದಾಗಿ ಜನರ ಇನ್ನಷ್ಟು ಮೆಚ್ಚುಗೆ ಪಡೆದಿದ್ದಾರೆ.
ವರ್ಷದ ಚಲನಚಿತ್ರ ವ್ಯಕ್ತಿತ್ವ ಪ್ರಶಸ್ತಿಗೆ ಮೆಗಾಸ್ಟಾರ್ ಚಿರಂಜೀವಿ ಭಾಜನ
ಇವರ ಈ ಆಕರ್ಷಕ ನಟನೆ, ಹಾವಭಾವ ಮತ್ತು ಬಗೆ ಬಗೆಯ ಶೈಲಿಯ ಪ್ರಭಾವವೇ ಅವರಿಗೆ 'ಮೆಗಾಸ್ಟಾರ್' ಎಂಬ ಬಿರುದನ್ನು ತಂದು ಕೊಟ್ಟಿದೆ. 2006 ರಲ್ಲಿ, ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.
ಸಮಾರಂಭದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ ಚಿರಂಜೀವಿ ಅವರಿಗೆ ಈ ಪ್ರಶಸ್ತಿಯನ್ನು ಘೋಷಿಸಿದರು. ಈ ಪ್ರಶಸ್ತಿಯು ಸಿನಿಮಾ, ಜನಪ್ರಿಯ ಸಂಸ್ಕೃತಿ ಮತ್ತು ಸಾಮಾಜಿಕವಾಗಿ ಮಹತ್ವದ ಕಲಾತ್ಮಕ ಕೆಲಸಕ್ಕಾಗಿ ಅವರು ನೀಡಿರುವ ಕೊಡುಗೆಗಳಿಂದಾಗಿ ಜನರಿಂದ (ಪ್ರೇಕ್ಷಕರಿಂದ) ಹೆಚ್ಚು ಆರಾಧಿಸಲ್ಪಟ್ಟ ಮೆಗಾಸ್ಟಾರ್‌ಗೆ ಈ ಪ್ರಶಸ್ತಿಯನ್ನು ಘೋಷಿಸಿದ್ದು, ಈ ಪ್ರಶಸ್ತಿ ಅವರಿಗೆ ರಾಷ್ಟ್ರವು ನೀಡುವ ಮನ್ನಣೆಯಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಹಿರಿಯ ನಟನನ್ನು ಅಭಿನಂದಿಸಿದ ಕೇಂದ್ರ ಸಚಿವರು, ಚಿರಂಜೀವಿ ಅವರು ಸುಮಾರು ನಾಲ್ಕು ದಶಕಗಳ ಕಾಲ ಸುದೀರ್ಘವಾಗಿ ಚಲನಚಿತ್ರ ರಂಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ನಟರಾಗಿ ಹಾಗೂ ನಿರ್ಮಾಪಕರಾಗಿ 150ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅವರು ನಟಿಸಿದ್ದಾರೆ ಎಂದರು.
ಚಿತ್ರರಂಗದ ದಿಗ್ಗಜರಾದ ವಹೀದಾ ರೆಹಮಾನ್, ರಜನಿಕಾಂತ್, ಇಳಯರಾಜ, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಅಮಿತಾಬ್ ಬಚ್ಚನ್, ಸಲೀಂ ಖಾನ್, ಬಿಸ್ವಜಿತ್ ಚಟರ್ಜಿ, ಹೇಮಾ ಮಾಲಿನಿ ಮತ್ತು ಪ್ರಸೂನ್ ಜೋಶಿ ಈ ಹಿಂದೆ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪಟ್ಟಿಗೆ ಇದೀಗ ಚಿರಂಜೀವಿ ಕೂಡ ಸೇರಿಕೊಂಡರು.
ಇದನ್ನೂ ಓದಿ:ಹೊಸ ಪ್ರತಿಭೆಗಳು ಹೊತ್ತು ತಂದ ಸಿರಿ ಲಂಬೋದರ ವಿವಾಹ ಟೀಸರ್ಗೆ ರಮೇಶ್ ಅರವಿಂದ್ ಫಿದಾ