ಗೋವಾ :ಕೆಲವು ದಿನಗಳಿಂದ ಗೋವಾದಲ್ಲಿ ನಡೆಯುತ್ತಿರುವ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸ್ಪರ್ಧೆಯಲ್ಲಿ 15 ಅತ್ಯುತ್ತಮ ಚಲನಚಿತ್ರಗಳ ಆಯ್ಕೆ ಮಾಡಲಾಗಿದ್ದು, ಅವುಗಳನ್ನು ಪ್ರದರ್ಶಿಸಿ ಪ್ರಶಸ್ತಿಗಳನ್ನು ನೀಡಲಾಯಿತು. 12 ಅಂತಾರಾಷ್ಟ್ರೀಯ ಮತ್ತು 3 ಭಾರತೀಯ ಚಲನಚಿತ್ರಗಳು ಸ್ಫರ್ಧೆಯಲ್ಲಿದ್ದವು.
ವಿಶೇಷವಾಗಿ ಈಗಾಗಲೇ ಹಲವು ಗೌರವ, ದಾಖಲೆಗಳಿಗೆ ಪಾತ್ರವಾಗಿರುವ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕನ್ನಡ ಸಿನಿಮಾ ‘ಕಾಂತಾರ’ಕ್ಕೆ ಪ್ರತಿಷ್ಠಿತ ಸಿಲ್ವರ್ ಪೀಕಾಕ್ ಪ್ರಶಸ್ತಿ ಲಭಿಸಿದೆ. ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ರಿಷಬ್ ಶೆಟ್ಟಿ ಪ್ರಶಸ್ತಿ ಪಡೆದುಕೊಂಡರು. ಈ ಮೂಲಕ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಅಥವಾ ‘ಸಿಲ್ವರ್ ಪೀಕಾಕ್’ ಪ್ರಶಸ್ತಿ ಪಡೆದ ಮೊದಲ ಕನ್ನಡ ಸಿನಿಮಾ ಎಂಬ ಖ್ಯಾತಿಗೆ ‘ಕಾಂತಾರ’ ಪಾತ್ರವಾಗಿದೆ. ಸಿನಿಮೋತ್ಸವದಲ್ಲಿ ಸ್ಪರ್ಧಾ ವಿಭಾಗದಲ್ಲಿ ‘ಕಾಂತಾರ’ ಸಿನಿಮಾ ಪ್ರದರ್ಶಿಸಲಾಯಿತು. ಸಿನಿಮಾ ಪ್ರದರ್ಶನದ ಜೊತೆಗೆ ರಿಷಬ್ ಶೆಟ್ಟಿಯ ಸಂವಾದ ಸಹ ಆಯೋಜನೆಯಾಗಿತ್ತು. ಅದಾದ ಬಳಿಕ ‘ಕಾಂತಾರ’ ಸಿನಿಮಾಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಘೋಷಣೆಯಾಗಿದೆ.
ಕಾಂತಾರ ಸಿನಿಮಾ ಕಳೆದ ವರ್ಷದ ಸೆಪ್ಟೆಂಬರ್ 30 ರಂದು ಬೆಳ್ಳಿ ತೆರೆಗೆ ಬಂದಿತ್ತು. ಬಳಿಕ ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಗಳಿಸುವುದಲ್ಲದೇ, ಚಿತ್ರಮಂದಿರಗಳಿಂದ ದೂರವಾಗಿದ್ದ ಕುಟುಂಬ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತಂದ ಸಿನಿಮಾ ಎನಿಸಿಕೊಂಡಿತ್ತು. ಒಂದು ಭಾಗದ ನೆಲದ ಸಂಸ್ಕೃತಿಯ ಕತೆಗಳನ್ನು ವಿಶ್ವಕ್ಕೆ ಸಿನಿಮಾ ಮೂಲಕ ಹೇಳಬಹುದು ಆ ಮೂಲಕ ದೊಡ್ಡ ಯಶಸ್ಸು ಗಳಿಸಬಹುದು ಎಂಬುದನ್ನು ರಿಷಬ್ ಶೆಟ್ಟಿ ಈ ಸಿನಿಮಾ ಮೂಲಕ ತೋರಿಸಿಕೊಟ್ಟಿದ್ದರು. ಜೊತೆಗೆ ಪ್ರಾದೇಶಿಕ ಕತೆಗಳನ್ನು ಸಿನಿಮಾ ಮೂಲಕ ಜಗತ್ತಿಗೆ ಪರಿಚಯಿಸಲು ಸಿನಿಮಾ ಕರ್ಮಿಗಳಿಗೆ ಸ್ಪೂರ್ತಿ ಒದಗಿಸಿತ್ತು. ಕನ್ನಡ ಚಿತ್ರರಂಗದ ಗರಿಮೆ ಹೆಚ್ಚಿಸಿದ, ಕರ್ನಾಟಕದ ಸಂಸ್ಕೃತಿ ಸಾರಿದ ‘ಕಾಂತಾರ’ಕ್ಕೆ ಈಗಾಗಲೇ ಹಲವು ಪ್ರಶಸ್ತಿ, ಗೌರವಗಳು ಸಂದಿವೆ.
ಅಬ್ಬಾಸ್ ಅಮಿನಿ ಅವರ ನಿರ್ದೇಶನದ ಇರಾನ್ ಸಿನಿಮಾ 'ಎಂಡ್‌ಲೆಸ್ ಬಾರ್ಡರ್ಸ್' 2023ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಗೋಲ್ಡನ್ ಪಿಕಾಕ್ ಪ್ರಶಸ್ತಿ ಗೆದ್ದುಕೊಂಡಿತು. 40 ಲಕ್ಷ ರೂ., ಪ್ರಮಾಣಪತ್ರ ಮತ್ತು ಅಸ್ಕರ್ ಗೋಲ್ಡನ್ ಪೀಕಾಕ್ ಪದಕವನ್ನು ಪ್ರಶಸ್ತಿ ಒಳಗೊಂಡಿದೆ.
ಇದನ್ನೂ ಓದಿ :'ಕಾಂತಾರ' ಒಂದು ದಂತಕಥೆ ಅಧ್ಯಾಯ- 1 ಟೀಸರ್, ಫಸ್ಟ್ ಲುಕ್ ರಿಲೀಸ್: 9 ಮಿಲಿಯನ್ಗೂ ಹೆಚ್ಚು ವೀಕ್ಷಣೆ