2023ರ ಬ್ಲಾಕ್ಬಸ್ಟರ್ ಸಿನಿಮಾ 'ಪಠಾಣ್'. ಈ ಸಾಲಿನಲ್ಲಿ 'ಟೈಗರ್ 3' ಕೂಡ ಸೇರ್ಪಡೆಗೊಳ್ಳಲಿದೆ. ಈ ಎರಡು ಚಿತ್ರಗಳಲ್ಲಿ ನಾಯಕಿಯರ ನಟನೆಗೆ ಅಮೋಘವಾದ ಮೆಚ್ಚುಗೆ ಸಿಕ್ಕಿದೆ. ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಸ್ಪೈ ಸಿನಿಮಾಗಳು ಇದಾಗಿದೆ. 'ಪಠಾಣ್' ಚಿತ್ರದಲ್ಲಿ ದೀಪಿಕಾ ಪಡುಕೋಣೆ ರುಬಾಯ್ ಪಾತ್ರದಲ್ಲಿದ್ದರೆ, ಕತ್ರಿನಾ ಕೈಫ್ ಜೋಯಾಳ ಪಾತ್ರ ಮಾಡಿದ್ದಾರೆ.
ಇದೀಗ ರುಬಾಯ್ ಮತ್ತು ಜೋಯಾ ಪಾತ್ರಗಳು ಮುಖಾಮುಖಿಯಾಗಿ ಕಣಕ್ಕಿಳಿದರೆ, ಯಾರು ಗೆಲ್ಲುತ್ತಾರೆ ಎಂಬ ಪ್ರಶ್ನೆಗೆ ಕತ್ರಿನಾ ಕೈಫ್ ಉತ್ತರಿಸಿದ್ದಾರೆ. ರುಬಾಯ್ಗಿಂತ ಜೋಯಾ ಹೆಚ್ಚು ಅನುಭವಿ ಏಜೆಂಟ್ ಆಗಿರುವುದರಿಂದ ಆಕೆಯೇ ಗೆಲ್ಲಬಹುದು ಎಂದು ಸುಳಿವು ನೀಡಿದ್ದಾರೆ. ಸಂದರ್ಶನವೊಂದರಲ್ಲಿ ನಟಿಗೆ, ರುಬಾಯ್ ಮತ್ತು ಜೋಯಾ ನಡುವಿನ ಹಣಾಹಣಿಯ ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು. "ಅದನ್ನು ಈ ರೀತಿಯಾಗಿ ಹೇಳೋಣ. ನನಗೆ ಎಲ್ಲಾ ಕಥೆಯ ಹಿನ್ನೆಲೆ ತಿಳಿದಿಲ್ಲ. ಆದರೆ ಜೋಯಾ ಅತ್ಯಂತ ಅನುಭವಿ ಏಜೆಂಟ್ ಎಂದು ತೋರುತ್ತದೆ. ಆದ್ದರಿಂದ ಹೆಚ್ಚು ಹೋರಾಟದ ಅನುಭವ ಜೋಯಾಗೆ ಇರುತ್ತದೆ. ಈ ವಿಚಾರವನ್ನು ನಿರ್ಧರಿಸಲು ನಾನು ನಿಮಗೆ ಬಿಡುತ್ತೇನೆ" ಎಂದು ಹೇಳಿದರು.
'ಟೈಗರ್ 3'ಗೆ ಉತ್ತಮ ರೆಸ್ಪಾನ್ಸ್:ನವೆಂಬರ್ 12ರಂದು ತೆರೆಕಂಡ 'ಟೈಗರ್ 3' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ನಟ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಮುಖ್ಯಭೂಮಿಕೆಯಲ್ಲಿದ್ದಾರೆ. ಐದು ದಿನಗಳಲ್ಲಿ ಸರಿಸುಮಾರು 187 ಕೋಟಿ ರೂ. ಗಳಿಸುವಲ್ಲಿ ಸಿನಿಮಾ ಯಶಸ್ವಿಯಾಗಿದೆ. ವಿಶ್ವಾದ್ಯಂತ ಕೇವಲ ನಾಲ್ಕು ದಿನಗಳಲ್ಲಿ 271.50 ಕೋಟಿ ರೂ. ಗಳಿಸಿದೆ ಎಂಬ ಮಾಹಿತಿ ಇದೆ. ತೆರೆಕಂಡ ಒಂದು ವಾರದಲ್ಲಿ ಜಾಗತಿಕವಾಗಿ 300 ಕೋಟಿ ರೂ. ಗಡಿ ದಾಟಲು ಸಜ್ಜಾಗಿದೆ.
ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ವಿಶಾಲ್ ಜೇತ್ವಾ ಕಾಣಿಸಿಕೊಂಡಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿ ನಿರ್ಮಾಪಕ ಆದಿತ್ಯ ಚೋಪ್ರಾ ಈ ಚಿತ್ರವನ್ನು ನಿರ್ಮಿಸಿದ್ದಾರೆ. 2017ರ ಟೈಗರ್ ಜಿಂದಾ ಹೈ ಚಿತ್ರದ ಮುಂದುವರಿದ ಭಾಗವೇ ಟೈಗರ್ 3. ಯಶ್ ರಾಜ್ ಫಿಲ್ಮ್ಸ್ನ ಸ್ಪೈ ಯೂನಿವರ್ಸ್ ಪ್ರಮುಖ ಪ್ರೊಜೆಕ್ಟ್. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ದೀಪಾವಳಿ ಸಂದರ್ಭ ಭರ್ಜರಿ ಓಪನಿಂಗ್ ಪಡೆದಿದ್ದು ಮಾತ್ರವಲ್ಲದೇ ಸಲ್ಮಾನ್ ಖಾನ್ ಅವರ ಸಿನಿಮಾಗಳ ಪೈಕಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಇದನ್ನೂ ಓದಿ:200 ಕೋಟಿಯತ್ತ ಸಲ್ಮಾನ್ ಕತ್ರಿನಾ ನಟನೆಯ 'ಟೈಗರ್ 3': ಕಲೆಕ್ಷನ್ ಡೀಟೆಲ್ಸ್ ಇಲ್ಲಿದೆ