ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿ ಭಾಷೆಯ ಸಿನಿಮಾಗಳಲ್ಲಿ ಬಹುಬೇಡಿಕೆ ಹೊಂದಿರುವ ನಟ ಪ್ರಕಾಶ್ ರಾಜ್. ಸಿನಿಮಾ ಜೊತೆಜೊತೆಗೆ ಸಮಾಜದ ಅಂಕುಡೊಂಕುಗಳ ಬಗ್ಗೆಯೂ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಇದೀಗ ಕನ್ನಡ ಭಾಷೆಯ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದಾರೆ. ಪ್ರಕಾಶ್ ರಾಜ್ ಅವರ ಹಳೆಯ ಫೋಟೋವೊಂದು ವೈರಲ್ ಆಗಿದ್ದು, ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ಕುರಿತು ಟ್ವೀಟಿಸಿರುವ ಪ್ರಕಾಶ್ ರಾಜ್, ನನ್ನ ಕನ್ನಡವನ್ನು ಅವಮಾನಿಸಿ ನಿಮ್ಮ ಭಾಷೆಯನ್ನು ಹೇರಿದರೆ ನಿಂತು ಹೋರಾಡುತ್ತೇನೆ ಎಂದಿದ್ದಾರೆ.
2020ರಲ್ಲಿ ಪ್ರಕಾಶ್ ರಾಜ್ ಅವರು ಒಂದು ಫೋಟೋ ಹಂಚಿಕೊಂಡಿದ್ದರು. ಅದರಲ್ಲಿ ಅವರು ಧರಿಸಿದ್ದ ಟೀ ಶರ್ಟ್ ಮೇಲೆ, "ನಂಗೆ ಹಿಂದಿ ಬರಲ್ಲ ಹೋಗ್ರಪ್ಪ" ಅಂತಾ ಬರೆದಿತ್ತು. ನಾನು ಹಲವು ಭಾಷೆ ಬಲ್ಲೆ. ಹಲವು ಭಾಷೆಗಳಲ್ಲಿ ಕೆಲಸ ಮಾಡಬಲ್ಲೆನು. ಆದರೆ ನನ್ನ ಕಲಿಕೆ, ನನ್ನ ಗ್ರಹಿಕೆ, ನನ್ನ ಬೇರು, ನನ್ನ ಶಕ್ತಿ, ನನ್ನ ಹೆಮ್ಮೆ, ನನ್ನ ಮಾತೃಭಾಷೆ ಕನ್ನಡ. ಹಿಂದಿ ಹೇರಿಕೆ ಬೇಡ" ಎಂದಿದ್ದರು. ಈ ಫೋಟೋ ಟ್ವೀಟ್ ಮಾಡಿರುವ ಶಶಾಂಕ್ ಶೇಖರ್ ಝಾ ಎಂಬವರು, ಪ್ರಕಾಶ್ ರಾಜ್ ವಿರುದ್ಧ ಎಫ್ಐಆರ್ ಹಾಕಿದ್ದೀರಾ? ಎಂದು ಪೊಲೀಸರಿಗೆ ಕೇಳಿದ್ದಾರೆ.
ಇದರ ಸ್ಕ್ರೀನ್‌ಶಾಟ್ ಅನ್ನು ಪ್ರಕಾಶ್ ರಾಜ್ ಹಂಚಿಕೊಂಡಿದ್ದಾರೆ. ನನ್ನ ಬೇರು, ನನ್ನ ಮೂಲ, ನನ್ನ ಕನ್ನಡ. ನನ್ನ ತಾಯಿಯನ್ನು ಗೌರವಿಸದೇ ನಿಮ್ಮ ಹಿಂದಿಯನ್ನು ಹೇರಿದರೆ ನಾವು ಹೀಗೇ ಪ್ರತಿಭಟಿಸುತ್ತೇವೆ. ಹೆದರೋಲ್ಲ ಅಷ್ಟೇ. ನನಗೆ ಬೆದರಿಕೆ ಹಾಕುತ್ತಿದ್ದೀರಾ ಅಂತಾ ಪ್ರಶ್ನಿಸಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ, ನಾನು ಏಳು ಭಾಷೆಗಳನ್ನು ಬಲ್ಲೆ. ಒಂದು ಭಾಷೆಯನ್ನು ಕಲಿತು ಮಾತನಾಡುವುದು ಎಂದರೆ ಆ ಭಾಷೆಯ ಜನರನ್ನು ಗೌರವಿಸುವುದು. ನಾನು ಹೋಗುವಲ್ಲೆಲ್ಲ ಆಯಾ ಭಾಷೆಯಲ್ಲಿ ಸಂವಾದಿಸುತ್ತೇನೆ. ನನ್ನ ಭಾಷೆಯನ್ನು ಅವರ ಮೇಲೆ ಹೇರುವುದಿಲ್ಲ. ಆದರೆ ನನ್ನ ಕನ್ನಡವನ್ನು ಅವಮಾನಿಸಿ ನಿಮ್ಮ ಭಾಷೆಯನ್ನು ಹೇರಿದರೆ ನಿಂತು ಹೋರಾಡುತ್ತೇನೆ. ಹಿಂದಿ ಹೇರಿಕೆಯನ್ನು ನಿಲ್ಲಿಸಿ ಎಂದಿದ್ದಾರೆ. ಪ್ರಕಾಶ್ ರಾಜ್ ಟ್ವೀಟ್‌ಗೆ ಸಾಕಷ್ಟು ಪರ ಹಾಗೂ ವಿರೋಧ ಪ್ರತಿಕ್ರಿಯೆಗಳು ಬಂದಿವೆ.