ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ 2023ರ ವಿಶ್ವಕಪ್ಗೆ ಇನ್ನೇನು 15 ದಿನಗಳು ಉಳಿದಿವೆ. ಈ ಹಿನ್ನೆಲೆಯಲ್ಲಿ ಸ್ಟಾರ್ ಸೆಲೆಬ್ರಿಟಿಗಳಿಗೆ ಗೋಲ್ಡನ್ ಟಿಕೆಟ್ ವಿತರಣೆ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ. ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಮತ್ತು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಈ ಟಿಕೆಟ್ಗಳನ್ನು ಈಗಾಗಲೇ ಸ್ವೀಕರಿಸಿದ್ದಾರೆ. ಇಂದು ತಮಿಳು ಸೂಪರ್ಸ್ಟಾರ್ ರಜನಿಕಾಂತ್ ಅವರಿಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಗೋಲ್ಡನ್ ಟಿಕೆಟ್ ಅನ್ನು ಹಸ್ತಾಂತರಿಸಿದ್ದಾರೆ.
ಈ ಮೂಲಕ ರಜನಿಕಾಂತ್ ಅವರು ವಿಶೇಷ ವಿಐಪಿ ಸ್ಟ್ಯಾಂಡ್ನಲ್ಲಿ ಕುಳಿತು ಎಲ್ಲಾ ಪಂದ್ಯಗಳನ್ನು ವೀಕ್ಷಿಸುವ ಅಪರೂಪದ ಅವಕಾಶವನ್ನು ಪಡೆದುಕೊಂಡಿದ್ದಾರೆ. ಗೋಲ್ಡನ್ ಟಿಕೆಟ್ ಫಾರ್ ಇಂಡಿಯಾ ಐಕಾನ್ಸ್ ಯೋಜನೆಯಡಿ ಭಾರತದ ಹಲವು ಸಾಧಕರಿಗೆ ಈ ರೀತಿಯ ವಿಶೇಷ ಆಹ್ವಾನವನ್ನು ನೀಡಲಾಗುತ್ತಿದೆ. ರಜನಿಕಾಂತ್ಗೆ ಗೋಲ್ಡನ್ ಟಿಕೆಟ್ ನೀಡಿ ವಿಶ್ವಕಪ್ಗೆ ಆಹ್ವಾನಿಸಿರುವ ಫೋಟೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ನಲ್ಲಿ (ಎಕ್ಸ್) ಪೋಸ್ಟ್ ಮಾಡಿದೆ.
"ಚಿತ್ರರಂಗದ ಆಚೆಗಿನ ವಿದ್ಯಮಾನ! ಬಿಸಿಸಿಐ ಗೌರವ ಕಾರ್ಯದರ್ಶಿ ಜಯ್ ಶಾ ಅವರು ವರ್ಚಸ್ಸು ಮತ್ತು ಸಿನಿಮೀಯ ತೇಜಸ್ಸಿನ ನಿಜವಾದ ಸಾಕಾರ ರಜನಿಕಾಂತ್ ಅವರಿಗೆ ಗೋಲ್ಡನ್ ಟಿಕೆಟ್ ಅನ್ನು ನೀಡಿದರು. ಈ ದಿಗ್ಗಜ ನಟ ಭಾಷೆ ಮತ್ತು ಸಂಸ್ಕೃತಿಯನ್ನು ಮೀರಿ ಲಕ್ಷಾಂತರ ಜನರ ಹೃದಯದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ವಿಶ್ವಕಪ್ 2023ರಲ್ಲಿ ತಲೈವಾ ನಮ್ಮ ಗೌರವಾನ್ವಿತ ಅತಿಥಿಯಾಗಿ ಅಲಂಕರಿಸಲಿದ್ದಾರೆ ಎಂದು ಹೇಳಲು ನಾವು ರೋಮಾಂಚನಗೊಂಡಿದ್ದೇವೆ" ಎಂದು ಬಿಸಿಸಿಐ ತನ್ನ ಪೋಸ್ಟ್ಗೆ ಕ್ಯಾಪ್ಶನ್ ನೀಡಿದೆ.