ಜೋಯಾ ಅಖ್ತರ್ ಅವರ 'ದಿ ಆರ್ಚೀಸ್' ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಖುಷಿ ಕಪೂರ್, ತಮ್ಮ ಮೊದಲ ಚಿತ್ರದಲ್ಲೇ ಉತ್ತಮ ಯಶಸ್ಸು ಕಂಡುಕೊಂಡಿದ್ದಾರೆ. ಇದೀಗ ಖ್ಯಾತ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅವರ ನಿರ್ಮಾಣದ ಮುಂಬರುವ ಚಿತ್ರದಲ್ಲಿ ಇಬ್ರಾಹಿಂ ಅಲಿ ಖಾನ್ ಅವರೊಂದಿಗೆ ನಟಿಸಲು ಸಜ್ಜಾಗಿದ್ದಾರೆ. ಈ ಸ್ಟಾರ್ ಮಕ್ಕಳಿಂದ ರೊಮ್ಯಾಂಟಿಕ್ ಹಾಸ್ಯ ಸಿನಿಮಾವೊಂದು ತೆರೆ ಮೇಲೆ ಮೂಡಿಬರಲು ಸಿದ್ಧವಾಗಿದೆ. ಇದನ್ನು ಓಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ.
'ದಿ ಅರ್ಚೀಸ್'ನಲ್ಲಿ ತಮ್ಮ ನೆಟ್ಫ್ಲಿಕ್ಸ್ ಚೊಚ್ಚಲ ಪ್ರವೇಶದ ನಂತರ ಖುಷಿ ಕಪೂರ್ ಮತ್ತೊಂದು ಡಿಜಿಟಲ್ ಯೋಜನೆಗೆ ತಯಾರಿ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ, ಕರಣ್ ಜೋಹರ್ ಅವರ ಬ್ಯಾನರ್ ಧರ್ಮ ಪ್ರೊಡಕ್ಷನ್ಸ್ನ ಡಿಜಿಟಲ್ ಅಂಗವಾದ ಧರ್ಮಟಿಕ್ಸ್ ನಿರ್ಮಾಣದ ಮುಂಬರುವ ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ಅವರು ಇಬ್ರಾಹಿಂ ಅಲಿ ಖಾನ್ ಜೊತೆ ಪರದೆ ಹಂಚಿಕೊಳ್ಳಲಿದ್ದಾರೆ. ಖುಷಿ ಕಪೂರ್ ಮತ್ತು ಇಬ್ರಾಹಿಂ ಅಲಿ ಖಾನ್ ಅವರ ಮುಂದಿನ ಯೋಜನೆಯು ಡೈರೆಕ್ಟ್ ಟು ಡಿಜಿಟಲ್ ಬಿಡುಗಡೆಯ ಉದ್ದೇಶವಾಗಿದೆ.
ಈ ಚಿತ್ರವನ್ನು ಶೌನಾ ಗೌತಮ್ ನಿರ್ದೇಶಿಸಲಿದ್ದು, ಇದು ಅವರ ಚೊಚ್ಚಲ ಪ್ರಾಜೆಕ್ಟ್. ಈ ಹಿಂದೆ ಶೌನಾ ಗೌತಮ್ ಅವರು, ಸಂಜು, ಒನ್ ಬೈ ಟು ಮತ್ತು ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಇದೀಗ ಸ್ವತಂತ್ರ ನಿರ್ದೇಶಕರಾಗಿ ಮಿಂಚಲು ಸಿದ್ಧರಾಗಿದ್ದಾರೆ. ಸದ್ಯ ಚಿತ್ರ ನಿರ್ಮಾಣ ತಂಡವು ಪ್ರಮುಖ ಒಟಿಟಿ ಪ್ಲಾಟ್ಫಾರ್ಮ್ನೊಂದಿಗೆ ಸ್ಟ್ರೀಮಿಂಗ್ ಹಕ್ಕುಗಳ ಕುರಿತು ಮಾತುಕತೆ ನಡೆಸುತ್ತಿದೆ. ಚಿತ್ರಕ್ಕೆ ಇನ್ನೂ ಹೆಸರಿಡದಿದ್ದರೂ, ಚಿತ್ರತಂಡ ಡಿಫರೆಂಟ್ ಹೆಸರಿನ ಹುಡುಕಾಟದಲ್ಲಿದೆ.