ಟಾಲಿವುಡ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ 'ಅನಿಮಲ್' ಚಿತ್ರದ ಮೂಲಕ ವಿಶ್ವದಾದ್ಯಂತ ಸಂಚಲನ ಮೂಡಿಸುತ್ತಿದ್ದಾರೆ. ಬಾಲಿವುಡ್ ನಟ ರಣ್ಬೀರ್ ಕಪೂರ್ ಮತ್ತು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಡಿಸೆಂಬರ್ 1ರಂದು ತೆರೆ ಕಂಡ ಸಿನಿಮಾ ಈಗಾಗಲೇ 600 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಭಾರತ ಮಾತ್ರವಲ್ಲದೇ, ವಿಶ್ವದಾದ್ಯಂತ ಈ ಸಿನಿಮಾ ವೇಗವಾಗಿ ಓಡುತ್ತಿದೆ.
ಇತ್ತೀಚೆಗೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅಮೆರಿಕ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿದ್ದ ಸಿನಿ ಪ್ರೇಮಿಗಳನ್ನು ಕೆಲಕಾಲ ರಂಜಿಸಿದರು. ಜೊತೆಗೆ ಮೆಗಾಸ್ಟಾರ್ ಚಿರಂಜೀವಿ ಜೊತೆ ಸಿನಿಮಾ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದರು. ಅವಕಾಶ ಸಿಕ್ಕರೆ ಖಂಡಿತಾ ಚಿರಂಜೀವಿ ಜೊತೆ ಆ್ಯಕ್ಷನ್ ಡ್ರಾಮಾ ಮಾಡುತ್ತೇನೆ ಎಂದು ಹೇಳಿದರು. ಇದು ಸಿನಿ ಪ್ರೇಮಿಗಳಿಗೆ ಹೆಚ್ಚು ಸಂತಸ ತಂದಿದೆ. ಈ ವಿಚಾರ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
'ನೀವು ಸಿನಿಮಾವನ್ನು ಸಿನಿಮಾದಂತೆ ನೋಡಿದ್ದೀರಿ';ಯುಎಸ್ ಪ್ರೇಕ್ಷಕರ ಜೊತೆ 'ಅನಿಮಲ್' ಸಿನಿಮಾ ವಿಚಾರವಾಗಿ ಕೆಲವು ಕಮೆಂಟ್ಗಳನ್ನು ಮಾಡಿದರು. "ಈವರೆಗಿನ ಸಿನಿಮಾ ಬಗೆಗಿನ ಎಲ್ಲಾ ಚರ್ಚಾ ಕಾರ್ಯಕ್ರಮದಲ್ಲಿ ನನಗೆ ಇಷ್ಟವಾಗಿದ್ದು ಅಂದ್ರೆ ಎಲ್ಲವೂ ಚಿತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನೇ ಕೇಳಿದ್ದಾರೆ. ಯಾರೂ ನನ್ನನ್ನು ಸ್ತ್ರೀ ದ್ವೇಷದ ಬಗ್ಗೆ ಪ್ರಶ್ನೆ ಮಾಡಲಿಲ್ಲ. ಯಾಕೆಂದರೆ ಇಲ್ಲಿ ಎಲ್ಲರೂ ಸಿನಿಮಾವನ್ನು ಸಿನಿಮಾದಂತೆ ನೋಡಿದ್ದೀರಿ. ಅದಕ್ಕೆ ಖುಷಿಯಾಗಿದ್ದೇನೆ" ಎಂದು ಸಂತಸ ವ್ಯಕ್ತಪಡಿಸಿದರು.