ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್ ಇಂದು ಹತ್ತು ವಿವಿಧ ವಿಭಾಗಗಳಲ್ಲಿನ ಶಾರ್ಟ್ಲಿಸ್ಟ್ ಅನ್ನು ಬಹಿರಂಗಪಡಿಸಿದೆ. ವಿಕ್ರಾಂತ್ ಮಾಸ್ಸೆ ಅವರ ''12th ಫೇಲ್'' ಮತ್ತು ಟೊವಿನೊ ಥಾಮಸ್ ಅವರ ''2018 - ಎವ್ರಿಒನ್ ಈಸ್ ಎ ಹೀರೋ'' ಸಿನಿಮಾಗಳು 'ಬೆಸ್ಟ್ ಇಂಟರ್ನ್ಯಾಶನಲ್ ಫೀಚರ್ ಫಿಲ್ಮ್ - ಆಸ್ಕರ್ 2024'ರ ಶಾರ್ಟ್ಲಿಸ್ಟ್ನ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿದ್ದವು. ಅದಾಗ್ಯೂ, ಮುಂದಿನ ಹಂತಕ್ಕೆ ಸ್ಥಾನ ಪಡೆಯಲು ಸಾಧ್ಯವಾಗದ ಕಾರಣ ಭಾರತ ಮತ್ತೊಮ್ಮೆ ನಿರಾಸೆ ಅನುಭವಿಸಿದೆ. ಶಾರ್ಟ್ ಲಿಸ್ಟ್ ಹೊರಬಂದಿದ್ದು, '2018' ಸಿನಿಮಾ ನಿರ್ದೇಶಕ ಜೂಡ್ ಆಂಥನಿ ಜೋಸೆಫ್ ಪ್ರತಿಕ್ರಿಯಿಸಿದ್ದಾರೆ.
ಜೂಡ್ ಆಂಥನಿ ಜೋಸೆಫ್ ನಿರ್ದೇಶನದ, ಟೊವಿನೋ ಥಾಮಸ್ ನಟನೆಯ ಚಿತ್ರ ''2018 - ಎವ್ರಿಒನ್ ಈಸ್ ಎ ಹೀರೋ''. ಕೇರಳದಲ್ಲಿ 2018ರಲ್ಲಿ ಸಂಭವಿಸಿದ ಭೀಕರ ಮಳೆ ಮತ್ತು ಪ್ರವಾಹದ ಕಥೆಯನ್ನಾಧರಿಸಿದೆ. ನಿರ್ದೇಶಕರೀಗ ತಮ್ಮ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಕ್ಷಮೆಯಾಚಿಸುವ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಆಸ್ಕರ್ 2024ರ ಫಾರಿನ್ ಫೀಚರ್ ಫಿಲ್ಮ್ ಲಿಸ್ಟ್ನಲ್ಲಿ ಸ್ಥಾನ ಪಡೆಯದಿರುವುದರ ಸಲುವಾಗಿ ಈ ಪೋಸ್ಟ್ ಶೇರ್ ಮಾಡಿದ್ದಾರೆ.
ಆಸ್ಕರ್ ಹಾದಿಯಲ್ಲಿ ಮುಂದೆ ಸಾಗುತ್ತಿರುವ ಸಿನಿಮಾಗಳ ಪಟ್ಟಿಯನ್ನು ಹಂಚಿಕೊಂಡ ನಿರ್ದೇಶಕರು, "ಎಲ್ಲರಿಗೂ ಶುಭಾಶಯಗಳು. ಆಸ್ಕರ್ ನಾಮಿನೇಶನ್ ಶಾರ್ಟ್ ಲಿಸ್ಟ್ ಅನಾವರಣಗೊಳಿಸಲಾಗಿದೆ. ನಮ್ಮ "2018 - ಎವ್ರಿಒನ್ ಈಸ್ ಎ ಹೀರೋ" ಸಿನಿಮಾ ಅಂತಿಮ 15 ಚಿತ್ರಗಳ ಶಾರ್ಟ್ ಲಿಸ್ಟ್ನಲ್ಲಿ ಸ್ಥಾನ ಗಳಿಸದಿರುವುದು ವಿಷಾದನೀಯ. ಜಗತ್ತಿನಾದ್ಯಂತದ 88 ಅಂತಾರಾಷ್ಟ್ರೀಯ ಭಾಷಾ ಸಿನಿಮಾಗಳ ಪೈಕಿ 15 ಸಿನಿಮಾಗಳ ಶಾರ್ಟ್ ಲಿಸ್ಟ್ ಇದು. ನಿರಾಶೆಗೊಳಿಸಿದ್ದಕ್ಕಾಗಿ ನನ್ನೆಲ್ಲಾ ಹಿತೈಷಿಗಳು ಮತ್ತು ಬೆಂಬಲಿಗರಲ್ಲಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತಿದ್ದೇನೆ. ಅದೇನೇ ಇದ್ದರೂ, ಈ ಸ್ಪರ್ಧೆಯಲ್ಲಿ ಸಿಕ್ಕ ಭಾರತವನ್ನು ಪ್ರತಿನಿಧಿಸುವ ಅವಕಾಶವು ನಾನು ಜೀವಮಾನವಿಡೀ ಸ್ಮರಿಸುವ ಕನಸಿನಂತಹ ಪ್ರಯಾಣವಾಗಿದೆ'' ಎಂದು ತಿಳಿಸಿದ್ದಾರೆ.