2018ರಲ್ಲಿ ಕನ್ನಡ ಚಿತ್ರರಂಗ ಅಲ್ಲದೇ ಬಾಲಿವುಡ್, ಕಾಲಿವುಡ್, ಟಾಲಿವುಡ್ ನಟಿಮಣಿಯರು ಚಿತ್ರರಂಗದಲ್ಲಿ ತಮಗಾದ 'ಮೀ ಟೂ' ಅನುಭವದ ಬಗ್ಗೆ ಹಂಚಿಕೊಳ್ಳುವ ಮೂಲಕ ದೇಶಾದ್ಯಂತ ದೊಡ್ಡ ಬಿರುಗಾಳಿ ಎಬ್ಬಿಸಿದ್ದರು. ಇದೀಗ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ನಟಿ ಆಶಿತಾ ಕೂಡ ಚಿತ್ರರಂಗದ ಕರಾಳ ಮುಖದ ಬಗ್ಗೆ ಮಾತನಾಡಿದ್ದಾರೆ. ಹೌದು ಕನ್ನಡ ಚಿತ್ರರಂಗದಲ್ಲಿ ಮೀ ಟೂ ಪರಿಸ್ಥಿತಿ ಇದೆ ಎಂಬ ಮಾತನ್ನು ಒಪ್ಪಿಕೊಳ್ಳುವ ಮೂಲಕ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಬಾ ಬಾರೋ ರಸಿಕ, ಗ್ರೀನ್ ಸಿಗ್ನಲ್, ರೋಡ್ ರೋಮಿಯೋ, ತವರಿನ ಸಿರಿ, ಆಕಾಶ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಆಶಿತಾ ನಟಿಸುವ ಮೂಲಕ ಚಿತ್ರರಂಗದಲ್ಲಿ ಬೇಡಿಕೆ ಹೊಂದಿದ್ದರು. ಅಭಿಮಾನಿಗಳು ಸಾಕಷ್ಟು ಬಾರಿ ನೀವು ಯಾಕೆ ಇತ್ತಿಚೆಗೆ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ನಿಮ್ಮನ್ನು ಮತ್ತೆ ತೆರೆ ಮೇಲೆ ನೋಡಲು ಇಷ್ಟಪಡುತ್ತೇವೆ ಎಂದು ಹೇಳುತ್ತಿದ್ದರು. ಆದರೆ, ಚಿತ್ರರಂಗದಿಂದ ದೂರ ಆದ ಬಗ್ಗೆ ಇದೀಗ ನಟಿ ಆಶಿತಾ ಬಿಚ್ಚಿಟ್ಟಿದ್ದಾರೆ.
ಸದ್ಯ ಚಿತ್ರರಂಗದಿಂದ ದೂರು ಉಳಿದಿರುವ ಆಶಿತಾ ಯೂ ಟ್ಯೂಬ್ ಚಾನೆಲ್ನ ಸಂದರ್ಶನವೊಂದರಲ್ಲಿ ಚಿತ್ರರಂಗದಲ್ಲಿ ಕೆಟ್ಟ ಸಂಸ್ಕೃತಿ ಇದೆ ಅನ್ನೋದನ್ನು ಬಾಯಿ ಬಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರೋ ಆಶಿತಾ, ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಯಾವುದೇ ಸಮಸ್ಯೆ ಆಗಲಿಲ್ಲ. ಆದರೆ ನಿಧಾನವಾಗಿ ಕೆಲವರು ಕೆಟ್ಟದಾಗಿ ನಡೆದುಕೊಳ್ಳಲು ಆರಂಭಿಸಿದರು. ಏನೇನೋ ಬೇಡಿಕೆ ಇಟ್ಟರು. ಅದು ಇಷ್ಟವಿಲ್ಲದೇ ನಾನು ಸಿನಿಮಾ ಇಂಡಸ್ಟ್ರಿ ಬಿಟ್ಟೆ ಎಂದು ಆಶಿತಾ ಹೇಳಿಕೊಂಡಿದ್ದಾರೆ.
1998 ರಲ್ಲಿ ಚಿತ್ರರಂಗಕ್ಕೆ ಬಂದಾಗ ಸಮಸ್ಯೆ ಆಗಿರಲಿಲ್ಲ:1998ರಲ್ಲಿ ಚಿತ್ರರಂಗಕ್ಕೆ ಬಂದಾಗ ಸಮಸ್ಯೆ ಬರಲಿಲ್ಲ. ಆ ನಂತರ ಸಿನಿಮಾ ಸ್ವಲ್ಪ ಕಮರ್ಷಿಯಲ್ ಆಗಲು ಶುರುವಾಯಿತು. 2006-07ರ ಸಮಯದಲ್ಲಿ ಯಾರ್ಯಾರೋ ಚಿತ್ರರಂಗಕ್ಕೆ ಬಂದರು. ಚಿತ್ರರಂಗದವರು ಬಿಟ್ಟು ರಿಯಲ್ ಎಸ್ಟೇಟ್‌ನವರೆಲ್ಲಾ ಬರಲು ಶುರು ಮಾಡಿದ್ದರು.
ಆ ಸಮಯದಲ್ಲಿ ಬೇರೆ ತರಹದ ಬೇಡಿಕೆಗಳು ಶುರುವಾಯಿತು. ಈ ಬಗ್ಗೆ ನಾನು ಬಹಿರಂಗವಾಗಿಯೇ ಹೇಳುತ್ತೇನೆ. ಏನೇನೋ ಬೇಡಿಕೆ ಶುರು ಆಯಿತು. ಸಾಮಾನ್ಯವಾಗಿ ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಇಂತಹ ಸಮಸ್ಯೆ ಎದುರಾಗುತ್ತದೆ. ಆದರೆ ನನಗೆ ಆರಂಭದಲ್ಲಿ ಸಮಸ್ಯೆ ಎದುರಾಗಿರಲಿಲ್ಲ ಎಂದರು.